ಉಡುಪಿ: ತುಂತುರು ಮಳೆಗೆ ಕಟ್ಟಡಕ್ಕೆ ನುಗ್ಗಿದ ನೀರು
ಉಡುಪಿ, ಜ.4(ಉಡುಪಿ ಟೈಮ್ಸ್ ವರದಿ): ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದ್ದು, ನಗರದ ಕಲ್ಸಂಕದ ಶ್ರೀರಾಮ್ ಬಿಲ್ಡಿಂಗ್ ಎದುರು ಕಳೆದ ವಾರ ಪರ್ಯಾಯ ಪ್ರಯುಕ್ತ ಡಾಮರೀಕರಣವಾಗಿದ್ದು, ಸರಿಯಾಗಿ ಚರಂಡಿ ವ್ಯವಸ್ಥೆ ಕಲ್ಪಿಸದೆ ರಸ್ತೆ ನಿರ್ಮಾಣದಿಂದ ಕಟ್ಟಡವು ಮಳೆ ನೀರಿನಿಂದ ಆವೃತ್ತವಾಗಿದೆ.
ವಿದ್ಯಾಸಮುದ್ರ ರಸ್ತೆಯನ್ನು ನಗರ ಸಭೆಯ ವಿಶೇಷ ಅನುದಾನದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಮಾಡಿ ಮರುಡಾಮರೀಕರಣ ಮಾಡಲಾಗಿದೆ. ಆದರೆ ಒಂದು ಪಾರ್ಶ್ವದಲ್ಲಿ ಮಾತ್ರ ಚರಂಡಿ ರಚಿಸಿದ್ದು, ಇನ್ನೊಂದು ಬದಿಯಲ್ಲಿ ಚರಂಡಿ ಮಾಡದ ಪರಿಣಾಮ ಶ್ರೀರಾಮ ಬಿಲ್ಡಿಂಗ್ನ ನೆಲಮಹಡಿ ನೀರು ತುಂಬಿದೆ. ಇದರ ಪರಿಣಾಮ ಕಟ್ಟಡದ ಜನರೇಟರ್ ಹಾಗೂ ಟಯರ್ ಅಂಗಡಿಗೆ ನೀರು ನುಗ್ಗಿದೆ.
ಈ ಬಗ್ಗೆ ಕಟ್ಟಡ ಮಾಲಕರು ನಗರ ಸಭೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ತಕ್ಷಣ ಸ್ಪಂದಿಸಿದ ನಗರಸಭೆಯ ಪೌರಾಯುಕ್ತರಾದ ರಾಯಪ್ಪ ಅವರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡ ಮಾಲಕರ ಬೇಡಿಕೆಗೆ ಸ್ಪಂದಿಸಿ, ಶೀಘ್ರವಾಗಿ ಚರಂಡಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.