ಹಿರಿಯ ಬಿಜೆಪಿ ಮುಖಂಡ, ಶಾರದಾ ಇಂಟರ್ನ್ಯಾಷನಲ್ ಹೋಟೇಲಿನ ಮಾಲಕ ಬಿ.ಸುಧಾಕರ ಶೆಟ್ಟಿ ಇನ್ನಿಲ್ಲ
ಉಡುಪಿ, ಜ.4(ಉಡುಪಿ ಟೈಮ್ಸ್ ವರದಿ): ಹಿರಿಯ ಬಿಜೆಪಿ ಮುಖಂಡ, ಹೊಟೇಲ್ ಉದ್ಯಮಿ ಬಿ. ಸುಧಾಕರ್ ಶೆಟ್ಟಿ (72) ಇಂದು ಮುಂಜಾನೆ ಹೃದಯಾಘಾತದಿಂದ ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ನಿಧನರಾದರು.
ಸುಧಾಕರ್ ಶೆಟ್ಟಿ ಅವರಿಗೆ ಇಂದು ಬೆಳಿಗ್ಗೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಮನೆಯವರು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸರಳ ಸಜ್ಜನಿಕೆ ಸುಧಾಕರ ಶೆಟ್ಟಿಯವರು ಕರಾವಳಿ ಬೈಪಾಸ್ ನಲ್ಲಿರುವ ಶಾರದಾ ಹೊಟೇಲ್ ನ ಮಾಲಕರಾಗಿದ್ದ ಇವರು, ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದರು. 2009 ರಿಂದ 2012 ರವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 1999ರಲ್ಲಿ ಯು.ಆರ್.ಸಭಾಪತಿ ವಿರುದ್ಧ ಅಲ್ಪ ಮತದಿಂದ ಸೋಲು ಕಂಡಿದ್ದರು.
2004ರ ಚುನಾವಣೆಯಲ್ಲಿ ಟಿಕೆಟ್ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2013ರ ಚುನಾವಣೆ ಯಲ್ಲಿ ಹಾಲಿ ಶಾಸಕರಾಗಿದ್ದ ರಘುಪತಿ ಭಟ್ ಸಿಡಿ ಗದ್ದಲದಿಂದ ಸ್ಪರ್ಧಿಸಲು ಹಿಂದೆ ಸರಿದ ಹಿನ್ನೆಲೆಯಲ್ಲಿ ಸುಧಾಕರ್ ಶೆಟ್ಟಿ ಕಣಕ್ಕಿಳಿದಿದ್ದರು. ಆದರೆ ಅವರು ಪ್ರಮೋದ್ ಮಧ್ವರಾಜ್ ವಿರುದ್ಧ ಸೋಲು ಅನುಭವಿಸಿದ್ದರು. ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅವರು ಅಲಂಕರಿಸಿದ್ದರು. ಹಲವು ವರ್ಷಗಳ ಕಾಲ ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಉಡುಪಿ ನಗರ ಸಭೆಯ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಕ್ರೀಡಾ ಪ್ರೇಮಿಯಾಗಿದ್ದ ಇವರು ವಾಲಿಬಾಲ್ ಆಟದ ಬಗ್ಗೆ ಅತಿಯಾದ ಒಲವು ಹೊಂದಿದ್ದರು.