ಜ.7ರಿಂದ ‘ಕೆಮ್ತೂರು ದೊಡ್ಡಣ್ಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬ’
ಉಡುಪಿ, ಜ.3: ತುಳುಕೂಟ ಉಡುಪಿಯ ವತಿಯಿಂದ 22ನೇ ವರ್ಷದ ‘ಕೆಮ್ತೂರು ದೊಡ್ಡಣ್ಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬ’ ಜ.7ರಿಂದ 13ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 38 ವರ್ಷಗಳ ಇತಿಹಾಸವಿರುವ ತುಳುಕೂಟ, ತುಳು ಸಂಸ್ಕೃತಿ, ಸಂಪ್ರದಾಯ ಹಾಗೂ ತುಳು ಭಾಷೆಯನ್ನು ಬೆಳೆಸುವ ಸುಮಾರು 10ರಿಂದ 12 ಕಾರ್ಯಕ್ರಮವನ್ನು ಪ್ರತಿವರ್ಷ ಮಾಡುತ್ತಿದೆ ಎಂದರು.
ಈ ವರ್ಷದ ಕೆಮ್ತೂರು ತುಳು ನಾಟಕ ಪರ್ಬವನ್ನು ಇತ್ತೀಚೆಗೆ ನಿಧನರಾದ ಹಿರಿಯ ರಂಗಕರ್ಮಿ ಕರಂದಾಡಿಲೀಲಾಧರ್ ಶೆಟ್ಟಿ ಅವರಿಗೆ ಅರ್ಪಿಸಲಿದ್ದೇವೆ. ತುಳು ನಾಟಕ ಸ್ಪರ್ಧೆಯ ಮೂಲಕ ತುಳು ರಂಗಭೂಮಿಯನ್ನು ಜೀವಂತವಾಗಿರಿಸುವ ಹಾಗೂ ಸೃಜನಶೀಲ ಆಧುನಿಕ ರಂಗಪ್ರಜ್ಞೆಯ ಪ್ರಯೋಗಗಳಿಗೆ ತೆರೆದುಕೊಳ್ಳುವ ಪ್ರಯತ್ನ ನಮ್ಮದಾಗಿದೆ ಎಂದು ವಿವರಿಸಿದರು.
ಈ ಬಾರಿಯ ಸ್ಪರ್ಧೆಗೆ ಒಟ್ಟು 7 ತಂಡಗಳನ್ನು ಆಯ್ಕೆ ಮಾಡಲಾಗಿದೆ. ಜ.7ರಂದು ಸಂಜೆ 5:30ಕ್ಕೆ ಸ್ಪರ್ಧೆಯು ಶಾಸಕ ಯಶಪಾಲ್ ಸುವರ್ಣ ಅವರ ಮೂಲಕ ಉದ್ಘಾಟನೆಗೊಳ್ಳಲಿದೆ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮೋದ್ ಮಧ್ವರಾಜ್, ಪ್ರಸಾದ್‌ರಾಜ್ ಕಾಂಚನ್, ಪ್ರವೀಣ್ ಶೆಟ್ಟಿ ಪುತ್ತೂರು, ಪೂರ್ಣಿಮಾ ಪಾಲ್ಗೊಳ್ಳುವರು. ಪ್ರತಿದಿನ ಸಂಜೆ 6:30ಕ್ಕೆ ನಾಟಕ ಸ್ಪರ್ಧಾ ನಾಟಕ ಪ್ರದರ್ಶನಗೊಳ್ಳಲಿದೆ.
ಸ್ಪರ್ಧೆಯ ನಾಟಕಗಳು: ಮೊದಲ ದಿನದಂದು ಪುತ್ತೂರು ಗಯಾಪದ ಕಲಾವಿದೆರ್ ಉಬರ್ ಇವರಿಂದ ಶಶಿಕುಮಾರ್ ಕೂಳೂರು ಮಂಜೇಶ್ವರ ನಿರ್ದೇಶನದಲ್ಲಿ ‘ಮುರಳಿ ಈ ಪಿರ ಬರೊಲಿ’, ನಂತರದ ದಿನಗಳಲ್ಲಿ ಕ್ರಮವಾಗಿ ಮುದ್ದಡ್ಕ ಶ್ರೀವಿಷ್ಣು ಕಲಾವಿದೆರ್ ದಿನೇಶ್ ಕರ್ಕೇರ ಮೂಡಬಿದ್ರೆ ನಿರ್ದೇಶನದಲ್ಲಿ ‘ಬ್ರಹ್ಮದಂಡ’, ಕುಡ್ಲ ಬಿ.ಸಿ.ರೋಡ್‌ನ ಓಂ ಶ್ರೀ ಕಲಾವಿದೆರ್ ಸುರೇಶ್ ಕುಲಾಲ್ ಬಿ.ಸಿ.ರೋಡ್ ನಿರ್ದೇಶನದಲಿ ‘ಅಂದ್‌ಂಡ ಅಂದ್ ಪನ್ಲೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಜ.10ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ಸಂತೋಷ್ ನಾಯಕ್ ಪಟ್ಲ ನಿರ್ದೇಶನದಲ್ಲಿ ‘ಒಂಜಿ ದಮ್ಮ ಪದ’, 11ಕ್ಕೆ ಮಣಿಪಾಲದ ಸಂಗಮ ಕಲಾವಿದೆರ್, ರೋಹಿತ್ ಎಸ್.ಬೈಕಾಡಿ ನಿರ್ದೇಶನದಲ್ಲಿ ‘ಮರಣ ಗೆಂದಿನಾಯೆ’, 12ರಂದು ಕೊಡವೂರು ನವಸುಮ ರಂಗಮಂಚ ಬಾಲಕೃಷ್ಣ ಕೊಡವೂರು ನಿರ್ದೇಶನದಲ್ಲಿ ‘ಗಿಡ್ಡಿ’ ಹಾಗೂ ಜ.13ರಂದು ಮಲ್ಪೆಯ ಕರಾವಳಿ ಕಲಾವಿದೆರ್ ವಿಜಯ ಆರ್.ನಾಯಕ್ ಮಾರ್ಪಳ್ಳಿ ನಿರ್ದೇಶನಲ್ಲಿ ‘ಎನ್ನುಲಾಯಿದಾಲ್’ ನಾಟಕಗಳನ್ನು ಪ್ರದರ್ಶಿಸಲಿವೆ.
ನಾಟಕ ಸ್ಪರ್ಧೆಯ ಮೂರು ವಿಜೇತ ತಂಡಗಳಿಗೆ ಕ್ರಮವಾಗಿ 20ಸಾವಿರ, 15ಸಾವಿರ, 10ಸಾವಿರ ರೂ.ನಗದು ಬಹುಮಾನ ನೀಡಲಾಗುವುದು. ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಬಹುಮಾನಗಳನ್ನು ಫೆಬ್ರವರಿ ತಿಂಗಳಲ್ಲಿ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ತುಳುಕೂಟವು ಈ ನಾಟಕ ಸ್ಪರ್ಧೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಎಂಜಿಎಂ ಕಾಲೇಜು ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ನಾಟಕ ಸಂಚಾಲಕ ಬಿ.ಪ್ರಭಾಕರ ಭಂಡಾರಿ, ಪ್ರಕಾಶ ಸುವರ್ಣ ಕಟಪಾಡಿ ಹಾಗೂ ಭಾರತಿ ಟಿ.ಕೆ. ಉಪಸ್ಥಿತರಿದ್ದರು.