2ನೇ ದಿನಕ್ಕೆ ಕಾಲಿಟ್ಟ ರಾಷ್ಟ್ರವ್ಯಾಪಿ ಲಾರಿ ಮುಷ್ಕರ: ರಸ್ತೆ ತಡೆ ನಡೆಸಿ ಪ್ರತಿಭಟನೆ
ಹೊಸದಿಲ್ಲಿ: ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ ಮಂಗಳವಾರ ಎರಡನೆ ದಿನಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ಇರುವ ನಗರಗಳಲ್ಲಿನ ಇಂಧನ ಪೂರೈಕೆ ವ್ಯತ್ಯಯವಾಗಿರುವುದರಿಂದ ಪೆಟ್ರೋಲ್ ಪಂಪ್ ಗಳೆದುರು ವಾಹನಗಳು ಸಾಲುಗಟ್ಟಿ ನಿಂತಿವೆ. ಹಿಟ್ ಎಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನನ್ನು ವಿರೋಧಿಸಿ ಟ್ರಕ್, ಬಸ್ ಹಾಗೂ ಟ್ಯಾಂಕರ್ ಚಾಲಕರು ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಯಾವುದೇ ಏರುಪೇರಾಗದಂತೆ ನೋಡಿಕೊಳ್ಳುವಂತೆ ಅಲ್ಲಿನ ಸರ್ಕಾರವು ಪೊಲೀಸರಿಗೆ ಮನವಿ ಮಾಡಿದೆ. ಈ ನಡುವೆ, ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾರಣಕ್ಕೆ ರಸ್ತೆ ಸವಾರರು ತೊಂದರೆ ಅನುಭವಿಸಬೇಕಾಗಿ ಬಂದಿತು.
ಸೋಮವಾರದಿಂದ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಂಥ ರಾಜ್ಯಗಳಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಕಾರಣಕ್ಕೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕದಲ್ಲಿ ಸ್ಥಳೀಯರು ಹಲವಾರು ನಗರಗಳಲ್ಲಿನ ಪೆಟ್ರೋಲ್ ಪಂಪ್ ಗಳತ್ತ ದೌಡಾಯಿಸಿದ್ದಾರೆ.
ಹೊಸ ಕಾನೂನಿನನ್ವಯ, ನಿರ್ಲಕ್ಷ್ಯದ ಚಾಲನೆ ಮಾಡಿ ಗಂಭೀರ ಅಪಘಾತವೆಸಗಿದ ನಂತರ, ಆ ಮಾಹಿತಿಯನ್ನು ಪೊಲೀಸರಿಗೆ ಅಥವಾ ಯಾವುದೇ ಅಧಿಕಾರಿಗೆ ನೀಡದೆ ಸ್ಥಳದಿಂದ ಪರಾರಿಯಾಗುವ ಚಾಲಕರಿಗೆ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ ರೂ. 7 ಲಕ್ಷದವರೆಗೆ ದಂಡ ವಿಧಿಸುವ ಅವಕಾಶ ಒದಗಿಸಲಾಗಿದೆ.