ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಇನ್ನೊಂದು ಕೋರೆಗಾಂವ್ ಯುದ್ಧಕ್ಕೆ ರೆಡಿಯಾಗಿ: ಸುಂದರ ಮಾಸ್ತರ್
ಪಡುಬಿದ್ರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪಡುಬಿದ್ರಿ ಶಾಖೆ ವತಿಯಿಂದ ಇಂದು ಭೀಮಾ ಕೋರೆಗಾಂವ್ ಯುದ್ಧದ 206ನೇ ವಿಜಯೋತ್ಸವವನ್ನು ಆಚರಿಸಲಾಯಿತು.
ಪಡುಬಿದ್ರಿ ಪಂಚಾಯತ್ ಬಳಿಯಿಂದ ಹೊರಟ ಮೊಂಬತ್ತಿ ಮೆರವಣಿಗೆಯು ಬಸ್ ನಿಲ್ದಾಣ ಬಳಿ ಬಂದು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಕಾರ್ಯಕ್ರಮಕ್ಕೆ ಸುಂದರ ಮಾಸ್ತರ್ ಚಾಲನೆ ಕೊಟ್ಟರು.
ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ಕೇಂದ್ರದಲ್ಲಿ ಇರುವ ಕೋಮುವಾದಿ ಸರಕಾರದ ಕೆಲವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ.ಒಂದುವೇಳೆ ಅವರು ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ನಾವೆಲ್ಲರೂ ಇನ್ನೊಂದು ಭೀಮಾ ಕೋರೆಗಾಂವ್ ಯುದ್ಧಕ್ಕೆ ರೆಡಿಯಾಗಬೇಕು ಎಂದರು.
ಬ್ರಾಹ್ಮಣ ಪೇಶ್ವೆಗಳ ಮನುವಾದಿ ಸಂವಿಧಾನದ ಆಡಳಿತದ ವಿರುದ್ಧ ಸಿಡಿದೆದ್ದ ಮಹರ್ ಸೈನಿಕರು ಪೇಶ್ವೆ ಸೈನಿಕರನ್ನು ಸದೆಬಡಿದು ಪೇಶ್ವೆ ಆಡಳಿತವನ್ನೇ ಕೊನೆಗಾಣಿಸಿದಂತೇ, ನಾವೂ ಸಹ ಕೋಮುವಾದಿ ಸರಕಾರವನ್ನು ಕಿತ್ತೊಗೆಯಬೇಕಿದೇ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ 1818 ರಲ್ಲಿ ನಡೆದ ಭೀಮಾ ಕೋರೇಗಾಂವ್ ಯುದ್ಧದ ವಿಜಯೋತ್ಸವ ಅದು ಭಾರತದ ಮೂಲನಿವಾಸಿಗಳ ಸ್ವಾಭಿಮಾನದ ವಿಜಯೋತ್ಸವ. ಅದು ಮೂಲನಿವಾಸಿಗಳ ಅಸ್ಮಿತೆಯ ವಿಜಯೋತ್ಸವ ಎಂದರು. ಜಾತಿ ತಾರತಮ್ಯವನ್ನೇ ಕಾನೂನು ಮಾಡಿ ಆಡಳಿತ ನಡೆಸುತ್ತಿದ್ದ ಬ್ರಾಹ್ಮಣ ಪೇಶ್ವೆಗಳ ಮರಾಠ 28000 ಸೈನಿಕರನ್ನು ಕೇವಲ 500 ಮಹರ್ ಸೈನಿಕರು ಸಿಧ್ಧನಾಕನ ನೇತೃತ್ವದಲ್ಲಿ ಕೇವಲ 12 ಘಂಟೆಯ ಯುಧ್ಧದಲ್ಲಿ ಸೋಲಿಸಿ ಜಾತಿ ತಾರತಮ್ಯದ ವಿರುದ್ಧ ಸೇಡುತೀರಿಸಿಕೊಂಡ ಉದಾಹರಣೆ ಬೇರೆಲ್ಲೂ ಕಾಣಸಿಗುವುದಿಲ್ಲ.
ಅದರಲ್ಲೂ ಈ ನೈಜ ಘಟನೆಯ ಬಗ್ಗೆ ಯಾವುದೇ ಭಾರತದ ಇತಿಹಾಸಕಾರರು ಪ್ರಸ್ತಾಪಿದೇ ಇರುವುದು ಮನುವಾದಿ ಮನಸ್ಸಿನ ಪ್ರತಿಬಿಂಬವಾಗಿದೆ. ಬಾಬಾಸಾಹೇಬರು ಲಂಡನ್ ನಲ್ಲಿ ಸಂಶೋಧನೆ ಮಾಡುವಾಗ ತಿಳಿದು ಬಂದ ಇತಿಹಾಸವನ್ನು ಭಾರತಕ್ಕೆ ಬಂದು ತಮ್ಮ ಪುಸ್ತಕದಲ್ಲಿ ನಮೂದಿಸಿದಾಗ ಮಾತ್ರ ಇದು ಬಯಲಾಯಿತು. ಆ ಕೋರೆಗಾಂವ್ ವಿಜಯೋತ್ಸವದ ವಿಜಯ ಸ್ಥಂಭ ಇವತ್ತಿಗೂ ಮಹಾರಾಷ್ಟ್ರದ ಭೀಮಾ ನದಿ ತೀರದ ಕೋರೆಗಾಂವ್ ನಲ್ಲಿ ಈಗಲೂ ಇದೆ. ಅಂಬೇಡ್ಕರ್ ರವರು ಪ್ರತೀ ವರ್ಷ ಜನವರಿ 1ರಂದು ತಮ್ಮ ಕುಟುಂಬ ಸಮೇತ ತಪ್ಪದೇ ಇಲ್ಲಿಗೆ ಭೇಟಿಕೊಡುತ್ತಿದರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾಸಂಚಾಲಕರಾದ ಪರಮೇಶ್ವರ ಉಪ್ಪೂರು, ಭಾಸ್ಕರ ಮಾಸ್ಟರ್, ಶ್ರೀಧರ ಕುಂಜಿಬೆಟ್ಟು, ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಅಶೋಕ ಕೊಂಚಾಡಿ, ಶಿವಾನಂದ ಬಿರ್ತಿ, ಸುಕೇಶ್ ಪಡುಬಿದ್ರಿ, ವಿಠಲ ಉಚ್ಚಿಲ, ಹರೀಶ್ಚಂದ್ರ ಕೆ.ಡಿ., ಪ್ರಶಾಂತ್ ಬಿರ್ತಿ ಭಾಗವಸಿದ್ದರು. ಆರಂಭದಲ್ಲಿ ಕೀರ್ತಿ ಕುಮಾರ್ ಸ್ವಾಗತಿಸಿ ವಿಠಲ ಮಾಸ್ಟರ್ ವಂದಿಸಿದರು.