ಉಡುಪಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಭವ್ಯ ಸ್ವಾಗತ
ಉಡುಪಿ, ಡಿ.30: ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ನಡುವೆ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ವಂದೇಭಾರತ್ ಎಕ್ಸ್ ಪ್ರೆಸ್ ರೈಲು ಅಪರಾಹ್ನ 1:20ಕ್ಕೆ ಉಡುಪಿ ತಲುಪಿದಾಗ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಈ ಅತ್ಯಾಧುನಿಕ ರೈಲು ಮಂಗಳೂರಿನಿಂದ 12:12ಕ್ಕೆ ಹೊರಟಿದ್ದು, ಸುರತ್ಕಲ್, ಮುಲ್ಕಿ ಹಾಗೂ ಪಡುಬಿದ್ರಿಗಳಲ್ಲಿ ಜನರಿಂದ ಸ್ವಾಗತ ಪಡೆದು ಉಡುಪಿಗೆ ಆಗಮಿಸಿತ್ತು.
ಬಳಿಕ ರೈಲು ಕಾರವಾರ ಮೂಲಕ ಮಡಗಾಂವ್‌ಗೆ 4.35ಕ್ಕೆ ತಲುಪಿತು. ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ರೈಲಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಕೊಂಕಣ ರೈಲ್ವೆಯನ್ನೂ ಕೂಡ ಹಂತ ಹಂತವಾಗಿ ನಿರ್ವಹಣೆಯ ಭರವಸೆ ನೀಡಿದರು, ಕೇಂದ್ರ ರೈಲ್ವೆಯಷ್ಟು ನಮ್ಮ ಕೊಂಕಣ ರೈಲು ಅಭಿವೃದ್ಧಿ ಆಗುತ್ತಿಲ್ಲ, ಮೇಲ್ದರ್ಜೆಗೂ ಹೋಗಿಲ್ಲ ಎಂದರು. ಮುಂದಿನ ದಿನಗಳಲ್ಲಿ ನಮ್ಮ ರೈಲ್ವೆಯ ಅಭಿವೃದ್ಧಿ ಬಗ್ಗೆ ಪ್ರಧಾನಿ, ರೈಲ್ವೆ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು. ಕೊಂಕಣ ರೈಲ್ವೆ ವಿದ್ಯುತೀಕರಣ ಆದ ಪರಿಣಾಮ ವೇಗವಾಗಿ ತಲುಪುತ್ತಿದೆ. ಇದು ನೂರು ಶೇಕಡಾ ಡಬ್ಲಿಂಗ್ ಆಗಿಲ್ಲ, ವೇಗ ಮತ್ತು ಡಬ್ಲಿಂಗ್ ಆಗಬೇಕಾಗಿದೆ. ಇದಕ್ಕೆ ಬೇಕಾದ ಪರಿಸರ ಇಲಾಖೆ ಹಸಿರು ನಿಶಾನೆ ಸಿಕ್ಕಿಲ್ಲ ಎಂದು ಸಚಿವೆ ತಿಳಿಸಿದರು.
ಅಮೃತ ಭಾರತ್ ತಿರುವನಂತಪುರಂ ನಿಂದ ಮುಂಬಯಿ ಆದರೇ ಕರಾವಳಿಗರಿಗೆ ಅನುಕೂಲ ಆಗುತ್ತದೆ, ಮನವಿ ಮಾಡುವುದಾಗಿ ತಿಳಿಸಿದರು. ವಂದೇ ಭಾರತ್ ರೈಲಿನಲ್ಲಿ ಪರಿಸರ ವೀಕ್ಷಣೆಗೆ ಅವಕಾಶ ಮಾಡಲಾಗಿದೆ, ಹೆಚ್ಚು ಹೆಚ್ಚು ಜನ ಯಾತ್ರೆ ಮಾಡಬೇಕು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಯಶ್ ಪಾಲ್ ಸುವರ್ಣ, ಸುನಿಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ರಘಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಎಸ್ಪಿ ಡಾ.ಅರುಣ್, ಸಿಇಒ ಪ್ರಸನ್ನ ಎಚ್ ಹಾಜರಿದ್ದರು.