ಕರಾವಳಿಯ ನಾನ್‌ ಸಿಆರ್‌ಝಡ್‌ ವಲಯದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಅನುಮತಿಗೆ ಮನವಿ

ಉಡುಪಿ: ಕರಾವಳಿಯ ನಾನ್ ಸಿಆರ್‌ಝಡ್ (ಕರಾವಳಿ ನಿಯಂತ್ರಣ ಅಲ್ಲದ ವಲಯ)ದಲ್ಲಿ ಸಾಂಪ್ರದಾಯಿಕವಾಗಿ ಮುಳುಗಿ ಮರಳು ತೆಗೆಯಲು ಅನುಮತಿ ನೀಡುವಂತೆ ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೊಯ್ಗೆ ದೋಣಿ ಕಾರ್ಮಿಕರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.

ಕರ್ನಾಟಕ ಕರಾವಳಿಯ 3 ಜಿಲ್ಲೆಗಳಲ್ಲಿ (ಉಡುಪಿ, ಉತ್ತರ ಕನ್ನಡ, ದ. ಕನ್ನಡ) ತಲತಲಾಂತರದಿಂದ ಪರಿಶಿಷ್ಟ ಜಾತಿ, ಸಮುದಾಯದವರು ಸಾಂಪ್ರದಾಯಿಕ ವಾಗಿ ನೀರಿನಲ್ಲಿ ಮುಳುಗಿ ಮಾನವ ಶ್ರಮದ ಮೂಲಕ ಮರಳನ್ನು ತೆಗೆಯುತ್ತಿದ್ದ ಪದ್ಧತಿ ಇದ್ದು, ಈಕಾರ್ಮಿಕರು ಕಾರ್ಮಿಕ ಇಲಾಖೆ ಯಲ್ಲಿ ನೋಂದಾಯಿತ ಕಾರ್ಮಿಕರಾಗಿದ್ದು, ಮರಳು ಪರವಾನಿಗೆ ಪಡೆದ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ನಿರ್ವಸಿಕೊಂಡಿದ್ದಾರೆ ಎಂದು ಸಂಘ ಮನವಿಯಲ್ಲಿ ಹೇಳಿದ್ದಾರೆ.

ಈ ಕಾರ್ಮಿಕರು ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಮರಳು ದಿಬ್ಬ ತೆರವುಗೊಳಿಸಲು ಪರವಾನಿಗೆ ಪಡೆಯಲು ಹೋರಾಟ ನಡೆಸುತ್ತಿದ್ದಾರೆ. ಗುಜರಾತ್ ರಾಜ್ಯದಲ್ಲಿ ವಿಶೇಷವಾಗಿ ಪರಿಶಿಷ್ಟ ಜಾತಿ-ಸಮುದಾಯವರಿಗೆ ಸಾಂಪ್ರದಾಯಿಕವಾಗಿ ನೀರಿನಲ್ಲಿ ಮುಳುಗಿ ಮಾನವ ಶ್ರಮದ ಮೂಲಕ ಮರಳು ತೆಗೆಯಲು ಅವಕಾಶವನ್ನು ನೀಡಿರುವಂತೆ ಕರಾವಳಿ ಜಿಲ್ಲೆಗಳಲ್ಲೂ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಪರಿಶಿಷ್ಟ ಜಾತಿಯ ಕಾರ್ಮಿಕರಿಗೆ ಪರವಾನಿಗೆ ನೀಡಿ ಕಾರ್ಮಿಕರ ಸ್ವತಂತ್ರ ಸ್ವಾಭಿಮಾನಿ ಬದುಕಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇ-ಪ್ರೊಕ್ಯೂರ್‌ಮೆಂಟ್ ಟೆಂಡರ್‌ನಲ್ಲಿ ಗುತ್ತಿಗೆ ಪರವಾನಿಗೆ ನೀಡುವಾಗ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಪರಿಶಿಷ್ಟ ಜಾತಿಯ ಕಾರ್ಮಿಕರನ್ನು ಪರಿಗಣಿಸಿ, ಪ್ರಾತಿನಿಧ್ಯ ನೀಡಬೇಕೆಂದು ಕೋರಲಾಗಿದೆ.

ಉಡುಪಿ ಜಿಲ್ಲಾಧಿಕಾರಿಯವರ ಮೂಲಕ ಮನವಿಯ ಪ್ರತಿಗಳನ್ನು ಕರ್ನಾಟಕ ರಾಜ್ಯದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹಾದೇವಪ್ಪ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ.ರೇಜು ಇವರಿಗೆ ಪ್ರತ್ಯೇಕವಾಗಿ ಕಳುಹಿಸಲಾಯಿತು.

ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಸಂಘದ ಅಧ್ಯಕ್ಷ ಕೆ.ಎಸ್. ವಿಜಯ ಕುಂದಾಪುರ, ಸದಸ್ಯರಾದ ಪ್ರಶಾಂತ್ ತೊಟ್ಟಂ, ಹರೀಶ್ ಕುಂದರ್ ಹಿರಿಯಡ್ಕ, ಕೃಷ್ಣ ಬಜೆ ಕುಕ್ಕೆಹಳ್ಳಿ, ಪ್ರಶಾಂತ್ ಬಿರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!