ಚುನಾವಣಾ ಆಶ್ವಾಸನೆಗಳನ್ನು ಮರೆತ ಬಿಜೆಪಿ- 2024ರ ಚುನಾವಣೆಯಲ್ಲಿ ಹಿಂದುತ್ವ ರಾಜಕಾರಣಕ್ಕೆ ಮರಳಿದೆ: ಶಶಿ ತರೂರ್
ಹೊಸದಿಲ್ಲಿ: ಬಿಜೆಪಿಯು ತನ್ನ ಹಿಂದಿನ ಚುನಾವಣಾ ಚುನಾವಣಾ ಆಶ್ವಾಸನೆಗಳನ್ನು ಮರೆತಿದ್ದು, ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಹಾಗೂ ಫೆಬ್ರವರಿಯಲ್ಲಿ ಅಬುದಾಭಿಯ ಹಿಂದೂ ದೇವಾಲಯ ಉದ್ಘಾಟನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅದು 2024ರ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ರಾಜಕಾರಣಕ್ಕೆ ಮರಳುವ ಸಂದೇಶವನ್ನು ನೀಡಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯು 2019ರ ಲೋಕಸಭಾ ಚುನಾಣೆ ಸಂದರ್ಭದಲ್ಲಿ ನೀಡಿದ್ದ ‘ಅಚ್ಚೇದಿನ್’ ಹಾಗೂ ‘ವರ್ಷಕ್ಕೆ ಎರಡು ಕೋಟಿ ಉದ್ಯೋಗ’ಗಳನ್ನು ನೀಡುವ ಭರವಸೆಯನ್ನು ಭರವಸೆಗಳನ್ನು ಮರೆತಿದ್ದಾರೆ ಎಂದು ಆರೋಪಿಸಿದ್ದಾರೆ.
‘‘ಪ್ರಧಾನಿ ನರೇಂದ್ರ ಮೋದಿಯವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ ಹಾಗೂ ಫೆಬ್ರವರಿ 14ರಂದು ಅಬುದಾಭಿಯಲ್ಲಿ ಬಿಎಪಿಎಸ್ ಹಿಂದೂ ದೇವಾಲಯ ಉದ್ಘಾಟಿಸಲಿದ್ದಾರೆ. ಬಳಿಕ ಶೀಘ್ರವೇ ಚುನಾವಣೆ ಗಳನ್ನು ಘೋಷಿಸಲಾಗುವುದೆಂದು ನಾನು ನಿರೀಕ್ಷಿಸುತ್ತೇನೆ” ಎಂದವರು ಹೇಳಿದ್ದಾರೆ.
‘‘ಬಿಜೆಪಿಯು 2014ರ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿಯವರು ಆರ್ಥಿಕ ಅಭಿವೃದ್ಧಿಗಾಗಿ ಉದಿಸಿದ ಅವತಾರವೆಂಬಂತೆ ಬಣ್ಣಿಸಿ ಹೋರಾಡಿತ್ತು. 2019ರ ಲೋಕಸಭಾ ಚುನಾವಣೆಯನ್ನು ಅದು ರಾಷ್ಟ್ರೀಯ ಭದ್ರತಾ ವಿಷಯವನ್ನು ಮುಂದಿಟ್ಟು ಕೊಂಡು ಹೋರಾಡಿತ್ತು. ಮೋದಿಯವರನ್ನು ಹಿಂದೂ ಹೃದಯ ಸಾಮ್ರಾಟ ಎಂಬುದಾಗಿ ಬಿಂಬಿಸುವುದೇ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಚುನಾವಣಾ ಕಾರ್ಯತಂತ್ರವಾಗಲಿದೆ ಎಂದು ಅವರು ʼxʼನಲ್ಲಿ ಹೇಳಿದ್ದಾರೆ.
‘‘ಅಚ್ಛೇ ದಿನ್ ಗೆ ಏನಾಗಿದೆ? ವರ್ಷಕ್ಕೆ 2 ಕೋಟಿ ಉದ್ಯೋಗಗಳಿಗೆ ಏನಾಗಿದೆ? ಸಾಮಾಜಿಕ- ಆರ್ಥಿಕ ಶ್ರೇಣಿಗಳವರ ಕೆಳ ಸ್ತರಕ್ಕೆ ಪ್ರಯೋಜನವನ್ನುಂಟು ಮಾಡುವ ಆರ್ಥಿಕ ಬೆಳವಣಿಗೆ ಏನಾಯಿತು? ಪ್ರತಿಯೊಬ್ಬ ಭಾರತೀಯನ ಜೇಬಿಗೆ ಹಾಗೂ ಬ್ಯಾಂಕ್ ಖಾತೆಗೆ ಹಣತುಂಬುವಂತಹ ಭರವಸೆ ಏನಾಯಿತು? ಹಿಂದುತ್ವ ವರ್ಸಸ್ ಜನ ಕಲ್ಯಾಣ ಎಂಬುದಾಗಿ ರೂಪುತಳೆಯುತ್ತಿರುವ ಈ ಚುನಾವಣೆಯಲ್ಲಿ ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಚರ್ಚಿಸಬೇಕಾಗಿದೆ” ಎಂದು ತರೂರ್ ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಪಾಲ್ಗೊಳ್ಳುವ ಬಗ್ಗೆ ಕಾಂಗ್ರೆಸ್ ಇನ್ನಷ್ಟೇ ನಿರ್ಧರಿಸಬೇಕಿದೆಯಾದರೂ, ತರೂರ್ ಅವರು ಧರ್ಮವೆಂಬುದು ವೈಯಕ್ತಿಕ ಆಯ್ಕೆಯಾಗಿದ್ದು ಅದನ್ನು ರಾಜಕೀಯ ದೃಷ್ಟಿಯಿಂದ ನೋಡಕೂಡದು ಅಥವಾ ದುರ್ಬಳಕೆ ಮಾಡಬಾರದು ಎಂದು ಹೇಳಿದ್ದಾರೆ. ಆಹ್ವಾನಿತರು ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಅವರ ವೈಯಕ್ತಿಕ ಆಯ್ಕೆಗೆ ಬಿಡಬೇಕೆಂದು ತಿರುವನಂತಪುರ ಕ್ಷೇತ್ರದ ಕಾಂಗ್ರೆಸ್ ಸಂಸದರೂ ಆದ ತರೂರ್ ಹೇಳಿದರು.