ಭಾರತವನ್ನು ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲು ಪ್ರಧಾನಿ ಮೋದಿ ತಪಸ್ಸಿನ ರೀತಿ ಕೆಲಸ ಮಾಡುತ್ತಿದ್ದಾರೆ: ಬಿ.ವೈ.ವಿಜಯೇಂದ್ರ
ಬೆಂಗಳೂರು: 2027ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದು, ಇದಕ್ಕಾಗಿ ತಪಸ್ಸಿನ ರೀತಿ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ಹೇಳಿದರು.
ನಗರದ ಕೆ.ಆರ್.ಪುರ ಬಿಬಿಎಂಪಿ ಕಚೇರಿ ಬಳಿ ಇಂದು ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ಶ್ರಮಿಸುವ ಪ್ರಧಾನಿ ನಮ್ಮ ಜೊತೆಗಿದ್ದಾರೆ. ಜಗತ್ತಿನಲ್ಲಿ ಒಬ್ಬ ದೇಶದ ಪ್ರಧಾನಮಂತ್ರಿ ತನ್ನ ದೇಶವನ್ನು ಶಕ್ತಿಶಾಲಿ ರಾಷ್ಟ್ರವಾಗಿ ಮಾಡುವ ದೃಷ್ಟಿಯಿಂದ ಕಳೆದ ಒಂಬತ್ತೂವರೆ ವರ್ಷಗಳಿಂದ ಒಂದು ದಿನವೂ ರಜೆ ಪಡೆಯದೆ, ವಿಶ್ರಾಂತಿ ಪಡೆಯದೆ ನಿರಂತರವಾಗಿ ಶ್ರಮಿಸುವ ಮೋದಿಜಿ ನಮಗೆ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.
“ಭಾರತವನ್ನು ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲು ತಪಸ್ಸಿನ ರೀತಿ ಅವರು ಕೆಲಸ ಮಾಡುತ್ತಿದ್ದಾರೆ. ಭಾರತದ ಕಟ್ಟಕಡೆಯ ವ್ಯಕ್ತಿಗೂ ಕೂಡ ದೇಶದ ಸೌಲಭ್ಯಗಳು ತಲುಪಬೇಕೆಂಬ ಸದುದ್ದೇಶದಿಂದ ನವೆಂಬರ್‌ನಲ್ಲಿ ಮೋದಿ ಈ ವಿಕಸಿತ ಭಾರತ ಯಾತ್ರೆಯನ್ನು ಉದ್ಘಾಟಿಸಿದ್ದಾರೆ. ಹಿಂದೆ ರಾಜ್ಯ, ಕೇಂದ್ರದ ಯೋಜನೆಯ ಪ್ರಯೋಜನ ಪಡೆಯಲು ಸರಕಾರಿ ಕಚೇರಿ ಮುಂದೆ ತಿಂಗಳುಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಿತ್ತು. ಕಮಿಷನ್ ಕೊಟ್ಟರಷ್ಟೇ ಕೇಂದ್ರದ ಯೋಜನೆಯ ಪ್ರಯೋಜನ ಸಿಗುತ್ತಿತ್ತು. ಕೇಂದ್ರದ 100 ರೂ. ಅನುದಾನದಲ್ಲಿ ಕೇವಲ 15 ರೂ. ಫಲಾನುಭವಿಗೆ ಸಿಗುತ್ತದೆ. ಉಳಿದುದನ್ನು ಬ್ರೋಕರ್ಗಳು ತಿಂದು ತೇಗುತ್ತಾರೆ ಎಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರೇ ಹೇಳಿದ್ದರು.
ಇಂದು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳು 51 ಕೋಟಿ ಜನರಿಗೆ ಹೊಸ ಬ್ಯಾಂಕ್ ಖಾತೆ ತೆರೆಸಿದ್ದಾರೆ. ಇದರಿಂದಾಗಿ ಜನ್‍ಧನ್ ಖಾತೆಗೆ ಎಲ್ಲ ಸವಲತ್ತುಗಳು, ಕಮಿಷನ್ ರಹಿತವಾಗಿ ತಲುಪುತ್ತಿದೆ. ಮಧ್ಯವರ್ತಿಗಳಿಲ್ಲದೆ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪಬೇಕು ಎಂಬ ದೃಷ್ಟಿಕೋನದ ಪಕ್ಷದ ಧ್ಯೇಯವನ್ನು ಪ್ರಧಾನಿಯವರು ಈಡೇರಿಸಿದ್ದಾರೆ. ಕೇಂದ್ರವು ಉಜ್ವಲ ಯೋಜನೆಯಡಿ 9.60 ಕೋಟಿ ಜನರಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಒದಗಿಸಿದೆ. ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕೊಡಲಾಗಿದೆ” ಎಂದು ವಿವರ ನೀಡಿದರು.
ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಮಾತನಾಡಿ, “ಮೋದಿ ನೇತೃತ್ವದಲ್ಲಿ 10 ವರ್ಷಗಳ ಕೇಂದ್ರ ಸರಕಾರದ ಸಾಧನೆ ಅನನ್ಯ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನಾವೆಲ್ಲ ನೋಡುವ ಅವಕಾಶ ಲಭಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.