ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ಸರ್ಕಾರ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆಸಿದೆ: ಯತ್ನಾಳ್ ಆರೋಪ
ವಿಜಯಪುರ: ಬಿ.ಎಸ್.ಯಡಿಯೂರಪ್ಪ ಚೇಲಾಗಳಿಗೆ ಸ್ಥಾನಮಾನ ನೀಡುವ ಮೂಲಕ ಇಡೀ ಲಿಂಗಾಯತ, ಪಂಚಮಸಾಲಿ ಪಂಗಡಗಳ ಮೂಗಿಗೆ ತುಪ್ಪ ಸವರಿದ್ದಾರೆ ಎಂದು ವಿಪಕ್ಷ ನಾಯಕರ ಲಿಸ್ಟ್ ಬಿಡುಗಡೆ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾ ವೇಳೆ ಯಡಿಯೂರಪ್ಪ ಸರ್ಕಾರದಲ್ಲಿ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ. 45 ರೂಪಾಯಿಯ ಒಂದು ಮಾಸ್ಕ್ ಗೆ 485 ರೂ. ಬಿಲ್ ಹಾಕಲಾಗಿದೆ. ಕೋವಿಡ್ ಬೆಡ್ನಲ್ಲೂ ಅವ್ಯವಹಾರ ಮಾಡಲಾಗಿದೆ. ಕಳ್ಳರು ಕಳ್ಳರೇ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಲೂಟಿ ಮಾಡುವ ಚಟ ಇಲ್ಲ. ನನಗೂ ಕೋವಿಡ್ ಬಂದಿತ್ತು. ಆ ವೇಳೆ ನನಗೂ 5 ಲಕ್ಷದ 80 ಸಾವಿರ ಬಿಲ್ ಮಾಡಿದ್ದಾರೆ. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ ಅಥವಾ ನೋಟೀಸ್ ನೀಡಲಿ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.