ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರಭಾಕರ ಭಟ್ ವಿರುದ್ದ ಜಾಮೀನು ರಹಿತ ಸೆಕ್ಷನ್ಗಳಡಿ ಎಫ್ಐಆರ್ ದಾಖಲು
ಬೆಂಗಳೂರು: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ರವಿವಾರ ಮಂಡ್ಯದಲ್ಲಿ ನೀಡಿರುವ ಅತ್ಯಂತ ಅವಹೇಳನಕಾರಿ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಇಂದು ಆತನ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಎಂಬ ಆರೋಪಿ ವಿರುದ್ದ ಜಾಮೀನು ರಹಿತ ಸೆಕ್ಷನ್ ಗಳಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ರವಿವಾರ ಮಂಡ್ಯದಲ್ಲಿ ನಡೆದ ಹನುಮ ಶೋಭಾ ಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್, “ಹಿಂದೆ ತಲಾಕ್ ತಲಾಕ್ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗ್ತಿದ್ದ. ನಿಮಗೆ ಪರ್ಮನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ತಲಾಕ್ ರದ್ದು ಮಾಡಿ ನಿಮಗೆ ಗೌರವ ಕೊಟ್ಟಿದ್ದು ಇದೇ ಹಿಂದೂ ಧರ್ಮ” ಎಂದು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇನ್ನೂ ಅನೇಕ ಪ್ರಚೋದನಕಾರಿ ಮಾತುಗಳನ್ನು ಅದೇ ಭಾಷಣದಲ್ಲಿ ಪ್ರಭಾಕರ್ ಭಟ್ ಹೇಳಿದ್ದ. ಈ ಬಗ್ಗೆ ರಾಜ್ಯಾದ್ಯಂತ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.