ಉದ್ಯಾವರ: ಹವಾನಿಯಂತ್ರಿತ “ಕ್ಸೇವಿಯರ್ ಸಭಾ ಭವನ” ಉದ್ಘಾಟನೆ

ಉಡುಪಿ, ಡಿ.24: ಉದ್ಯಾವರದ ಸ0ತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ವ್ಯಾಪ್ತಿಯಲ್ಲಿರುವ ಹವಾನಿಯಂತ್ರಿತ ಮತ್ತು ನವೀಕರಿಸಿದ 800 ಆಸನ ಸಾಮರ್ಥ್ಯದ ‘ಕ್ಸೇವಿಯರ್ ಸಭಾ ಭವನ’ ಶನಿವಾರ ಉದ್ಘಾಟನೆಗೊಂಡಿತು. ದೇವಾಲಯದ ಪ್ರಧಾನ ಧರ್ಮಗುರು ಫಾ. ಸ್ಟ್ಯಾನಿ ಬಿ ಲೋಬೋ ಸಭಾಂಗಣವನ್ನು ಉದ್ಘಾಟಿಸಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ನೂತನ ಸಭಾ ಭವನದ ಆಶೀರ್ವಚನ ನಡೆಸಿದರು.

ಉದ್ಘಾಟನಾ ಸಮಾರಂಭದಲ್ಲಿ ಸಂತಸ ವ್ಯಕ್ತಪಡಿಸಿದ ಫಾ.ಸ್ಟ್ಯಾನಿ ಬಿ ಲೋಬೊ, ವಿವಿಧ ಸವಾಲುಗಳನ್ನು ಮೆಟ್ಟಿನಿಂತು ಸಭಾಂಗಣ ಇಂದು ಉದ್ಘಾಟನೆಗೊಂ ಡಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಲು ಪದಗಳಿಲ್ಲ. ಉದ್ಯಾವರದ ಜನತೆಯ ಸಹಕಾರದೊಂ ದಿಗೆ ನೂತನ‌ಸಭಾ ಭವನ‌ ನಿರ್ಮಾಣಕ್ಕೆ ಮುಂದಡಿಯಿಟ್ಟಾಗ ಎಲ್ಲರೂ ಕೃತಜ್ಞಾತಪೂರ್ವಕವಾಗಿ ಕೈ ಜೋಡಿಸಿದ್ದಾರೆ. ಸಮಿತಿ ಮತ್ತು ನಿರ್ಮಾಣಕ್ಕೆ ಕೊಡುಗೆ ನೀಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

ಕಾಪು ಶಾಸಕ ಸುರೇಶ ಶೆಟ್ಟಿ ಗುರ್ಮೆ ಮಾತನಾಡಿ, ಧರ್ಮದ ಎಲ್ಲೆ ಮೀರಿ ಒಗ್ಗಟ್ಟಿಗೆ ಒತ್ತು ನೀಡಿ, ನಾವು ಬೇರೆ ಬೇರೆ ಧರ್ಮದಲ್ಲಿ ಹುಟ್ಟಿದ್ದರೂ ಒಂದೇ ಕುಟುಂಬದಂತೆ ಬಾಳಬೇಕು. ಕಾಪುವಿನ ಜನತೆ ನನ್ನನ್ನು ಪ್ರಥಮ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನು ನನ್ನ ಕ್ಷೇತ್ರದ ಜನತೆಗೆ ಆಭಾರಿಯಾಗಿದ್ದೇನೆ ಎಂದರು.

ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಉದ್ಯಾವರ ಐಸಿವೈಎಂ ಅಧ್ಯಕ್ಷರ ನಿಧನಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ, ಈ ಸಂತೋಷದಾಯಕ ದಿನವೂ ಘಟನೆಯಿಂದ ದುಃಖದಿಂದ ತುಂಬಿದೆ. ಇತರ ಗಾಯಾಳುಗಳು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಉದ್ಯಾವರದ ದೇವಾಲಯದ ಭಕ್ತವೃಂದವನ್ನು ನಾನು ಅಭಿನಂದಿಸುತ್ತೇನೆ. ಏಕೆಂದರೆ ಅವರು ಕೈಗೊಂಡ ಯಾವುದೇ ಕೆಲಸವು ಯಶಸ್ವಿಯಾಗಿ ದಡ ಸೇರಿಸುತ್ತಾರೆ ಎಂದರು. ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಸಂಪೂರ್ಣ ಸುಸಜ್ಜಿತ ಸಭಾಂಗಣದ ಅವಶ್ಯಕತೆಯಿದೆ. ಇದನ್ನು ನನಸಾಗಿಸುವ ಜವಾಬ್ದಾರಿಯನ್ನು ಫಾದರ್ ಸ್ಟ್ಯಾನಿ ಬಿ ಲೋಬೋ ಅವರು ವಹಿಸಿಕೊಂಡರು.

ಸಂಪೂರ್ಣ ಸುಸಜ್ಜಿತ ಸಭಾಂಗಣವನ್ನು ಹೊಂದುವ ಕನಸನ್ನು ನನಸು ಮಾಡಿದ್ದಕ್ಕಾಗಿ ನಾನು ದೇವಾಲಯದ ಧರ್ಮ ಗುರುಗಳನ್ನು, ಪಾಲನಾ ಸಮಿತಿ, ಹಣಕಾಸು ಸಮಿತಿ ಮತ್ತು ಎಲ್ಲಾ ಧರ್ಮಸ್ಥರನ್ನು ಅಭಿನಂದಿಸುತ್ತೇನೆ ಎಂದರು.

ಚರ್ಚ್ ಗಾಯನ ತಂಡದವರಿಂದ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಭಾ ಭವನದ ಇಂಜಿನಿಯರ್ ಗಣೇಶ್ ಬೈಲೂರು, ಸುರೇಶ್ ಶೆಟ್ಟಿ ಗುರ್ಮೆ, ಫಾದರ್ ಸ್ಟ್ಯಾನಿ ಬಿ ಲೋಬೋ ಹಾಗೂ ಸಭಾ‌ಭವನಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಂಡವಿ ಬಿಲ್ಡರ್ಸ್ ಎಂಡಿ ಜೆರ್ರಿ ವಿನ್ಸೆಂಟ್ ಡಯಾಸ್, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ಫಾದರ್ ಲಿಯೋ ಪ್ರವೀಣ್ ಡಿಸೋಜ, ಟ್ರಸ್ಟಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಹಲೀಮಾ ಸಾಬ್ಜು ಆಡಿಟೋರಿಯಂ ಉದ್ಯಾವರ, ಉದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಸಂದೀಪ್, ನಾರ್ಬರ್ಟ್ ಕ್ರಾಸ್ಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲಾರೆನ್ಸ್ ಡೆಸಾ ಸ್ವಾಗತಿಸಿ, ಕಾರ್ಯದರ್ಶಿ ಜಾನ್ ಎಂ ಡಿಸೋಜ ವಂದಿಸಿದರು. 20 ಆಯೋಗಗಳ ಸಂಯೋಜಕ ಜೆರಾಲ್ಡ್ ಪಿರೇರಾ, ಕಟ್ಟಡ ಸಮಿತಿ ಸಂಚಾಲಕರಾದ ಮೆಲ್ವಿನ್ ನೊರೋಹ್ನ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಜೆರಾಲ್ಡ್ ಪಿರೇರಾ, ಸಂಯೋಜಕರು, ಪ್ಯಾರಿಷ್ ಪ್ಯಾಸ್ಟೋರಲ್ ಕಮಿಷನ್, ಮೆಲ್ವಿನ್ ನೊರೋಹ್ನಾ, ಸಂಚಾಲಕರು, ಕಟ್ಟಡ ಸಮಿತಿ, ಮತ್ತು ಇತರರನ್ನು ಅಭಿನಂಧಿಸಲಾಯಿತು. ಪ್ರವೀಣ್ ಪಿಂಟೋ ಮತ್ತು ಮೈಕಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!