ಸಿಎಂ ಹಿಜಾಬ್ ವಾಪಸಾತಿ ಹೇಳಿಕೆ ವಿದ್ಯಾರ್ಥಿಗಳ ನಡುವಿನಲ್ಲಿ ಸಂಘರ್ಷ ಸೃಷ್ಟಿ- ಯಶ್ಪಾಲ್ ಸುವರ್ಣ
ಉಡುಪಿ: ಕಳೆದ ಆರು ತಿಂಗಳಿನಿಂದ ರಾಜ್ಯ ಸರ್ಕಾರ ತಾನು ಚುನಾವಣೆಯಲ್ಲಿ ನೀಡಿದ ಉಚಿತ ಭಾಗ್ಯಗಳನ್ನು ಈಡೇರಿಸಲು ವಿಫಲವಾಗಿ ಗೊಂದಲದಲ್ಲಿದೆ. ತಮ್ಮ ಗೊಂದಲಗಳನ್ನು ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಾಸಾತಿಯ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ನಿಷೇಧ ವಾಪಸ್ ಪಡೆಯಲು ಆದೇಶ ಹೊರಡಿಸಿದರೆ ರಾಜ್ಯ ಸರಕಾರ ಜೇನು ಗೂಡಿಗೆ ಕೈ ಹಾಕಿದಂತೆ, ಈಗಾಗಲೇ ಶಾಲಾ ಅಭಿವೃದ್ದಿ ಕಾರ್ಯಗಳಿಗೆ ಅನುದಾನ, ಶಿಕ್ಷಕರ ನೇಮಕಾತಿ ಸಹಿತ ಮೂಲ ಸೌಕರ್ಯ ಕಲ್ಪಿಸಲು ವಿಫಲವಾಗಿರುವ ಸರಕಾರ ಈ ಹೇಳಿಕೆಯ ಮೂಲಕ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಲು ಮುಂದಾಗಿದೆ.
ಮುಖ್ಯಮಂತ್ರಿಗಳ ಹೇಳಿಕೆಯಿಂದ ವಿದ್ಯಾರ್ಥಿಗಳ ನಡುವಿನಲ್ಲಿ ಸಂಘರ್ಷ ಸೃಷ್ಟಿಗೆ ಅವಕಾಶ ನೀಡಿದಂತಾಗಿದೆ. ಮತೀಯವಾದಿ ಶಕ್ತಿಗಳ ಓಲೈಕೆಗಾಗಿ ಸಿದ್ದರಾಮಯ್ಯ ರವರು ಮುಂದಾಗಿರುವುದು ದುರದೃಷ್ಟಕರ.
ಸರಕಾರ ಈ ಕೂಡಲೇ ಹಿಜಾಬ್ ನಿಷೇಧ ಹಿಂಪಡೆಯುವ ಚಿಂತನೆಯನ್ನು ತಕ್ಷಣ ಕೈಬಿಟ್ಟು ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಸುಗಮ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ವಾತಾವರಣ ಕಲ್ಪಿಸಲು ಮುಂದಾಗಲಿ. ತಪ್ಪಿದಲ್ಲಿ ಈ ಬಗ್ಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.