ಪ್ರತಿಯೊಬ್ಬರು ಶಾಂತಿಯ ದೂತರಾದಾಗ ಪ್ರೀತಿಯ ಭಾರತವನ್ನು ಕಟ್ಟಲು ಸಾಧ್ಯ- ವಂ|ಡಾ|ಜೆರಾಲ್ಡ್ ಐಸಾಕ್
ಉಡುಪಿ: ಹಿಂಸೆಗೆ ಉತ್ತರವಾಗಿ ಪ್ರೀತಿಯನ್ನು ತಿಳಿಸಲು ಯೇಸು ಕ್ರಿಸ್ತರು ಧರೆಯಲ್ಲಿ ಹುಟ್ಟಿಬಂದರು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಮಂಗಳವಾರ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಆಯೋಜಿಸಿದ್ದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹ ಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಡೀ ಮನುಕುಲ ಜಾತಿ ಮತ ಬೇಧವಿಲ್ಲದೆ ಆಚರಿಸುವ ಹಬ್ಬ ಕ್ರಿಸ್ತ ಜಯಂತಿಯಾಗಿದ್ದು ಇದರ ಕೇಂದ್ರ ವ್ಯಕ್ತಿ ಯೇಸು ಕಂದರಾಗಿದ್ದಾರೆ. ಯೇಸು ಸ್ವಾಮಿ ಈ ಜಗತ್ತಿಗೆ ನೀಡಿದ ಕಾಣಿಕೆ ಶಾಂತಿ ಸಮಾಧಾನ ಆದರೆ ಇಂದು ಸಮಾಜದಲ್ಲಿ ಅಶಾಂತಿ, ಅಸಮಾನತೆ, ಅನ್ಯಾಯ, ಬಡತನ, ನಿರುದ್ಯೋಗ, ಹಿಂಸೆ ಶೋಷಣೆ, ರೋಗರುಜಿನ, ದ್ವೇಷ ಯುದ್ದ, ಅತ್ಯಾಚಾರ, ಮತಾಂದತೆ, ಪರಮತ ಅಸಹಿಷ್ಣುತೆ ಇತ್ಯಾದಿಗಳನ್ನು ಕಾಣುತ್ತಿದ್ದು ಇವುಗಳನ್ನು ಗೆಲ್ಲಲು ಪ್ರೀತಿಯಿಂದ ಮಾತ್ರ ಸಾಧ್ಯ. ಶಾಂತಿ ಇದ್ದಲ್ಲಿ ಮಾತ್ರ ಭಾವೈಕ್ಯತೆ ಸಾಮರಸ್ಯ, ಸಹಬಾಳ್ವೆ, ಸಮಾಧಾನ ಸಾಧ್ಯ ಪ್ರತಿಯೋಬ್ಬರು ಶಾಂತಿಯ ದೂತರಾದಾಗ ಶಾಂತಿ ಪ್ರೀತಿಯ ಭಾರತವನ್ನು ಕಟ್ಟಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಇದರ ಗೆಸ್ಟ್ ರಿಲೇಶನ್ ಮ್ಯಾನೇಜರ್ ರಾಘವೇಂದ್ರ ನಾಯಕ್, ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಹೆಚ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು ಶುಭ ಹಾರೈಸಿದರು.
2023ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಹರೀಶ್ ಸುವರ್ಣ ಬಲೈಪಾದೆ ಅವರಿಗೆ ಗೌರವಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ಡಾ|ರೋಶನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಧರ್ಮಗುರುಗಳಾದ ವಂ|ವಲೇರಿಯನ್ ಮೆಂಡೊನ್ಸಾ, ವಂ|ಚಾರ್ಲ್ಸ್ ಮಿನೇಜಸ್, ಅನುಗ್ರಹ ಪಾಲನಾ ಕೇಂದ್ರದ ನಿರ್ದೇಶಕ ವಂ|ವಿನ್ಸೆಂಟ್ ಕ್ರಾಸ್ತಾ ಉಪಸ್ಥಿತರಿದ್ದರು.
ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ|ಆಲ್ವಿನ್ ಸಿಕ್ವೇರಾ ಸ್ವಾಗತಿಸಿ, ಮಾಧ್ಯಮ ಸಂಯೋಜಕರಾದ ಮೈಕಲ್ ರೊಡ್ರಿಗಸ್ ವಂದಿಸಿದರು. ವಂ|ಸಿರಿಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.