ಗುರುವಂದನಾ ಕಾರ್ಯಕ್ರಮದ ಕೃತಜ್ಞತಾ ಸಭೆ- ಹೃದಯತುಂಬಿ ಬಂದಿದೆ ಪೇಜಾವರಶ್ರೀ
ಉಡುಪಿಯಲ್ಲಿ ನಮ್ಮಷಷ್ಟ್ಯಬ್ದದ ನಿಮಿತ್ತ ಸಮಾರಂಭವೊಂದನ್ನು ಆಯೋಜಿಸುವ ವಿಚಾರವಷ್ಟೆ ತಿಳಿದಿತ್ತು ಆದರೆ ನಿತ್ಯ ಒಂದಿಲ್ಲೊಂದು ಕಾರ್ಯಕ್ರಮಗಳ ಕಾರಣದಿಂದ ಸಂಚಾರದಲ್ಲಿರುವುದ ರಿಂದ ಕಾರ್ಯಕ್ರಮದ ಬಗ್ಗೆ ಹೆಚ್ಚು ವಿವರ ತಿಳಿದು ಕೊಂಡಿರಲಿಲ್ಲ. ಆದರೆ, ಆ ದಿನ ಬೆಳಿಗ್ಗೆ ಮಹಾಯಾಗಗಳು, ಮಧ್ಯಾಹ್ನ 14 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ, ಸಮಾಜಕ್ಕೆ ಗೋವುಗಳಿಗೆ ಉಪಯುಕ್ತವಾದ ಅನೇಕ ಸೇವಾಕಾರ್ಯಗಳು, ಸಂಜೆ ಪರ್ಯಾಯೋತ್ಸವಗಳಿಗೆ ಸಮವೆನಿಸುವ ಬೃಹತ್ ಶೋಭಾಯಾತ್ರೆ, ಅದ್ದೂರಿಯ ಅಭಿವಂದನ ಸಭೆ, ರಾತ್ರಿ ಹನ್ನೊಂದು ಘಂಟೆಯ ವರೆಗೂ ನಡೆದ ಭಜನ್ಸ್ ಕಾರ್ಯಕ್ರಮ ಕೊನೆಯವರೆಗೂ ನೆರೆದಿದ್ದ ಅಪಾರ ಜನಸ್ತೋಮ ಹೀಗೆ ಅತ್ಯಂತ ವೈಭವದ ಸಮಾರಂಭ ವನ್ನು ಕಂಡು ಹೃದಯ ತುಂಬಿ ಬಂದಿದೆ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿಯ ಜನತೆ ತೋರಿದ ಈ ಬಗೆಯ ಪ್ರೀತಿ ಅಭಿಮಾನಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ . ಇದೆಲ್ಲ ಸಲ್ಲಬೇಕಾದ್ದು ನಮಗಲ್ಲ. ಪೇಜಾವರ ಮಠದ ರಾಮವಿಠಲ ಹಾಗೂ ಉಡುಪಿಯ ಕೃಷ್ಣನಿಗೆ.
ಪೇಜಾವರ ಮಠಕ್ಕೆ ನಿಮ್ಮೆಲ್ಲರಂತೆ ನಾನೂ ಒಬ್ಬ. ಆದರೆ ಪೀಠ ಮತ್ತು ಮಠ ಶಾಶ್ವತ. ಆದ್ದರಿಂದ ಪೇಜಾವರ ಮಠ ನಮ್ಮದು ಎಂಬ ಭಾವನೆಯಿಂದ ಇಷ್ಟು ಉತ್ತಮ ಕಾರ್ಯಕ್ರಮ ನೆರವೇರಿಸಿಕೊಟ್ಟ ಎಲ್ಲರಿಗೂ ಭಗವಂತನ ವಿಶೇಷ ಕೃಪೆಯನ್ನು ಪ್ರಾರ್ಥಿಸುತ್ತೇವೆ. ಮುಂದೆಯೂ ಅನೇಕ ಸಮಾಜಮಖಿ ಕಾರ್ಯ ಯೋಜನೆಗಳು ನಮ್ಮ ಮನಸ್ಸಿನಲ್ಲಿವೆ. ಅವುಗಳಲ್ಲಿಯೂ ಎಲ್ಲರೂ ಕೈಜೋಡಿಸುವಂತಾಗಲಿ ಎಂದು ಶ್ರೀಪಾದರು ತಿಳಿಸಿದರು.
ಶ್ರೀ ಪೇಜಾವರ ಗುರುವಂದನ ಸಮಿತಿಯ ವತಿಯಿಂದ ಸೋಮವಾರ ಶ್ರೀಮಠದ ಸಭಾಭವನದಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಶ್ರೀಗಳು ಸಮಾರಂಭಕ್ಕೆ ಸಹಕಸರ ನೀಡಿದ ದಾನಿಗಳು, ಹಾಗೂ ಎಲ್ಲ ರೀತಿಯಲ್ಲಿ ಸಹಕರಿಸಿದ ಗಣ್ಯರು ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸಿ ಸಂದೇಶ ನೀಡಿದರು.
ಸಮಿತಿ ಅಧ್ಯಕ್ಷ ಶಾಸಕ ಯಶ್ಪಾಲ್ ಎ ಸುವರ್ಣ ಸ್ವಾಗತಿಸಿದರು. ಪ್ರ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಚಂದ್ರೇಶ್ ಪಿತ್ರೋಡಿ ವಂದಿಸಿದರು. ಉಪಾಧ್ಯಕ್ಷ ಎಸ್ ವಿ ಭಟ್, ಪ್ರೊ ಅರವಿಂದ ಹೆಬ್ಬಾರ್, ಅಜಯ್ ಪಿ ಶೆಟ್ಟಿ, ಸಂಕೇತ್ ಮಂಜುಳಾ ಪ್ರಸಾದ್ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು.