ಕಾಂಗ್ರೆಸ್‌ನಿಂದ ರೈತರ ದಾರಿ ತಪ್ಪಿಸುವ ಪ್ರಯತ್ನ: ಕುಯಿಲಾಡಿ
ಉಡುಪಿ: ಕೇಂದ್ರ ಸರಕಾರದ ಜನಪ್ರಿಯತೆ ಸಹಿಸದ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಕೃಷಿ ಮಸೂದೆಯ ಬಗ್ಗೆ ರೈತರಿಗೆ ತಪ್ಪು ಮಾಹಿತಿ ನೀಡಿ ಸಿ.ಎ.ಎ. ಮಾದರಿಯಲ್ಲಿ ಪ್ರತಿಭಟನೆ ನಡೆಸಿ ರೈತರ ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರತರಾಗಿರುವುದು ದುರದೃಷ್ಟಕರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಪದೇ ಪದೇ ಉಲ್ಲೇಖ ಮಾಡಿರುವಂತೆ ಇದೀಗ ನೂತನ ಕೃಷಿ ಮಸೂದೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆಯ ಜೊತೆಗೆ ರೈತರು ತಾವು ಬೆಳೆದ ಬೆಳೆಗಳನ್ನು ಯಾವುದೇ ಮಧ್ಯವರ್ತಿ ಹಾವಳಿ ಇಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ ಮಾರಾಟ ಮಾಡುವ ಸದವಕಾಶ ಕಲ್ಪಿಸಿರುವುದು ರೈತಾಪಿ ವರ್ಗದಲ್ಲಿ ಭರವಸೆಯ ಹೊಸ ಆಶಾಕಿರಣ ಮೂಡಿಸಿದೆ ಎಂದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಈ ಹಿಂದೆ ಸಂಸತ್ತಿನಲ್ಲಿ ಮಾತನಾಡಿ ಉಲ್ಲೇಖಿಸಿರುವ ಎಲ್ಲಾ ಅಂಶಗಳೂ ಮಸೂದೆಯಲ್ಲಿ ಅಡಕವಾಗಿವೆ. ಆದಾಗ್ಯೂ ಅಧಿವೇಶನದಲ್ಲಿ ಭಾಗವಹಿಸದ ಕಾಂಗ್ರೆಸ್ ವರಿಷ್ಠ ನಾಯಕರು ವಿದೇಶ ಪ್ರವಾಸದಲ್ಲಿದ್ದು ಮರಳಿದ ಬಳಿಕ ರೈತಸ್ನೇಹಿ ಕೃಷಿ ಮಸೂದೆಯ ನೈಜತೆಯನ್ನು ಮರೆಮಾಚಿ ಅಪಪ್ರಚಾರದಲ್ಲಿ ತೊಡಗಿರುವುದು ಖೇಧಕರ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತರುವ ಪ್ರತಿಯೊಂದು ಹೊಸ ಮಸೂದೆಗಳನ್ನು ಕೇವಲ ವಿರೋಧಕ್ಕಾಗಿಯೇ ವಿರೋಧಿಸುವ ಕೀಳು ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ಅರಿತುಕೊಂಡಲ್ಲಿ ಇನ್ನಷ್ಟು ಸಮಯ ವಿರೋಧ ಪಕ್ಷವಾಗಿ ಉಳಿಯಬಹುದೇನೋ. ತಪ್ಪಿದಲ್ಲಿ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ವಿಸರ್ಜನೆಗೊಳ್ಳಬೇಕೆಂದಿದ್ದ ಮಹಾತ್ಮಾ ಗಾಂಧಿ ಮಾತನ್ನು ದೇಶದ ಯುವ ಜನತೆ ಈಡೇರಿಸುವುದು ನಿಶ್ಚಿತ ಎಂದು ಕುಯಿಲಾಡಿ ಹೇಳಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ರೈತ ದೇಶದ ಬೆನ್ನೆಲುಬು. ಕೇಂದ್ರ ಸರಕಾರ ನೂತನ ಕೃಷಿ ಮಸೂದೆಯ ಮೂಲಕ ಕಳೆದ 70 ವರ್ಷಗಳಿಂದ ರೈತರಿಗಾಗುತ್ತಿದ್ದ ಅನ್ಯಾಯಕ್ಕೆ ಇತಿಶ್ರೀ ಹಾಡಿದೆ. ಕೃಷಿ ವಲಯದ ಮೂಲ ಸೌಕರ್ಯ ಅಭಿವೃದ್ಧಿ, ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ, ಕೃಷಿ ಉತ್ಪನ್ನಗಳ ಮುಕ್ತ ಮಾರಾಟ ವ್ಯವಸ್ಥೆ ಮುಂತಾದ ಅವಕಾಶಗಳೊಂದಿಗೆ ಈ ಮಸೂದೆಯು ರೈತರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರೈತಪರ ಸರಕಾರಗಳು ರೈತಾಪಿ ವರ್ಗದ ಶ್ರೋಯೋಭಿವೃದ್ಧಿಗೆ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ರೈತ ಬಂಧುಗಳಿಗೆ ತಲುಪಿಸುವ ಜೊತೆಗೆ ಜಿಲ್ಲಾ ರೈತ ಮೋರ್ಚಾ ರೈತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿ ಸಾರ್ಥಕ ಸೇವೆಗೈದು ಮಾದರಿ ಮೋರ್ಚಾವಾಗಿ ರೂಪುಗೊಳುವಲ್ಲಿ ಶ್ರಮಿಸಲಿದೆ ಎಂದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಕಾಂಚನ್, ಧೀರಜ್ ಕೆ.ಎಸ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು ಹಾಗೂ ಜಿಲ್ಲಾ-ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ಮಹೋಹರ್ ಎಸ್. ಕಲ್ಮಾಡಿ ವಂದಿಸಿದರು.