ಸುದ್ಧಿವಾಹಿನಿಗಳು ಯಾವುದೇ ವ್ಯಕ್ತಿ, ನಿರ್ದಿಷ್ಟ ಗುಂಪುಗಳನ್ನು ನಿಂದಿಸಬಾರದು: ವಾರ್ತಾ ಮತ್ತು ಪ್ರಸಾರ ಸಚಿವಾಲಯ
ನವದೆಹಲಿ: ಎಲ್ಲಾ ಖಾಸಗಿ ಟಿವಿ ಚಾನೆಲ್ಗಳು ಕಾರ್ಯಕ್ರಮ ಸಂಹಿತೆಯನ್ನು ಪಾಲಿಸಬೇಕು ಮತ್ತು ಯಾವುದೇ ವ್ಯಕ್ತಿ ಅಥವಾ ಕೆಲವು ಗುಂಪುಗಳನ್ನು ನಿಂದಿಸಬಾರದು ಅಥವಾ ಅಪ ಪ್ರಚಾರ ಮಾಡಬಾರದೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತೆ ಹೇಳಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ತನಿಖೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾನಹಾನಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ನಟ ರಕುಲ್ ಪ್ರೀತ್ ಸಿಂಗ್ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಈ ಸಲಹೆ ನೀಡಲಾಗಿದೆ.
ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ನಿಯಂತ್ರಣ) ಕಾಯ್ದೆ 1995 ಮತ್ತು ನಿಯಮಗಳ ಪ್ರಕಾರ ನಿಗದಿಪಡಿಸಿದಂತೆ ಕಾರ್ಯಕ್ರಮ ಮತ್ತು ಜಾಹಿರಾತು ಸಂಹಿತೆಗಳಿಗೆ ಕಟ್ಟುನಿಟ್ಟಾಗಿ ಅಂಟಿಕೊಂಡಿರುವ ಅಂಶಗಳ ಬಗ್ಗೆ ಪ್ರಸಾರ ಮಾಡಲು ಖಾಸಗಿ ಉಪಗ್ರಹ ಟಿವಿ ಚಾನೆಲ್ಗಳಿಗೆ ಈ ಹಿಂದೆ ವಿವಿಧ ಸಂದರ್ಭಗಳಲ್ಲಿ ಸಲಹೆ ನೀಡಲಾಗಿದೆ ಎಂದು ಸಚಿವಾಲಯ ತನ್ನ ಸಲಹೆಯಲ್ಲಿ ತಿಳಿಸಿದೆ.
ಮಾನಹಾನಿಕಾರ, ದುರುದ್ದೇಶಪೂರಿತ, ಸುಳ್ಳು ಅಥವಾ ಅರ್ಧ ಸತ್ಯದಿಂದ ಕೂಡಿರುವ ವಿಷಯಗಳ ಬಗ್ಗೆ ಪ್ರಸಾರ ಮಾಡದಂತೆ ಕಾರ್ಯಕ್ರಮ ಸಂಹಿತೆಯಲ್ಲಿರುವ ವಿನಾಯಿತಿಯತ್ತ ಗಮನ ನೀಡುವಂತೆ ಸಲಹೆ ನೀಡಲಾಗಿದೆ.