ಶಿರೂರು: ದೋಣಿ ಮಗುಚಿ ಇಬ್ಬರು ಮೀನುಗಾರರು ಮೃತ್ಯು- ಓರ್ವನ ರಕ್ಷಣೆ
ಬೈಂದೂರು: ಮೀನುಗಾರಿಕಾ ಬೋಟ್ ಮಗುಚಿ ಇಬ್ಬರು ಮೀನುಗಾರರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ.
ಮೃತರನ್ನು ಶಿರೂರು ಹಡವಿನಕೋಣೆ ನಿವಾಸಿ ಅಬ್ಸುಲ್ ಸತ್ತರ್ (45 ) ಹಾಗೂ ಭಟ್ಕಳ ಕುದ್ವಾಯಿ ರೋಡ್ ನಿವಾಸಿ ಮಿಸ್ಬಾ ಯೂಸುಫ್ (48) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ 10ಗಂಟೆ ಶಿರೂರು ಕಳುಹಿತ್ಲುನಿಂದ ನುಮೈರಾ ಅಂಜುಮ್ ಎಂಬ ದೋಣಿಯಲ್ಲಿ 3 ಜನರು ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿಕೊಂಡು ವಾಪಾಸ್ಸು ಬರುತ್ತಿರುವಾಗ ಸುಮಾರು ಮಧ್ಯರಾತ್ರಿ 1.30ರ ವೇಳೆಗೆ ಶಿರೂರು ಕಳುಹಿತ್ಲು ಅಳಿವೆ ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ ಮಗುಚಿಬಿದ್ದಿದೆ. ಇದರ ಪರಿಣಾಮ ಅಬ್ಸುಲ್ ಸತ್ತರ್ ಮತ್ತು ಮಿಸ್ಬಾ ಯೂಸುಫ್ ಮೃತಪಟ್ಟಿದ್ದಾರೆ. ದೋಣಿಯಲ್ಲಿದ್ದ ಮತ್ತೋರ್ವ ಬುಡ್ಡು ಮುಖ್ತಾರ್ (37) ಎಂಬಾತನನ್ನು ಇನ್ನೊಂದು ದೋಣಿಯಲ್ಲಿದ್ದ ಮಾಮ್ಸು ಯಾಕೂಬ್ ಎಂಬವರು ರಕ್ಷಣೆ ಮಾಡಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.