ಕಳವಾದ 18 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ವಶಕ್ಕೆ- ಓರ್ವನ ಬಂಧನ
ಮಣಿಪಾಲ: ಠಾಣಾ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ ಕಳವಾದ ಮೊಬೈಲ್ ಫೋನ್ಗಳನ್ನು ಸೆಂಟ್ರಲ್ ಇಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟಾರ್ (ಸಿಇಐಆರ್ ಪೋರ್ಟಲ್) ಮೂಲಕ ಪೊಲೀಸರು ಪತ್ತೆ ಹಚ್ಚಿದ್ದು ಹೀಗೆ ಸುಮಾರು 3.5ಲಕ್ಷ ರೂ.ಮೌಲ್ಯದ ಒಟ್ಟು 18 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನ.5ರಂದು ರಾತ್ರಿ ಈಶ್ವರ ನಗರದ ದಿಯಾಂಜಲಿ ಎಂಬವರ ಮೊಬೈಲ್ ಫೋನ್ ಮತ್ತು ನ.27ರಂದು ಅವರ ಸ್ನೇಹಿತೆಯ ಮೊಬೈಲ್ ಫೋನ್ ಕಳವಾಗಿರುವ ಬಗ್ಗೆ ಡಿ.16ರಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ಕಳವಾದ ಮೊಬೈಲ್ ಫೋನ್ಗಳನ್ನು ಸಿಇಐಆರ್ ಪೋರ್ಟಲ್ನಲ್ಲಿ ನಮೂದಿಸಿದ್ದರು.
ಈ ಮೊಬೈಲ್ಗಳನ್ನು ಅಪರಿಚಿತ ವ್ಯಕ್ತಿ ಉಪಯೋಗಿಸುತ್ತಿರುವ ಬಗ್ಗೆ ಪೋರ್ಟಲ್ನಲ್ಲಿ ಕಂಡು ಬಂದಿದ್ದು ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಆರೂರು ಗ್ರಾಮದ ದೀಕ್ಷಿತ್ (27) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನಿಂದ ಮಣಿಪಾಲ ಠಾಣಾ ವ್ಯಾಪ್ತಿಯ ಬೇರೆ ಬೇರೆ ಕಡೆಗಳಲ್ಲಿ ಕಳವು ಮಾಡಿದ ಒಟ್ಟು 6 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಶಪಡಿಸಿಕೊಂಡ 18 ಮೊಬೈಲ್ ಫೋನ್ಗಳನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಎಸ್.ಟಿ. ಶನಿವಾರ ಮಣಿಪಾಲ ಠಾಣೆಯಲ್ಲಿ ವಾರೀಸುದಾರರಿಗೆ ಹಸ್ತಾಂತರಿಸಿದರು.
ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ ನೇತೃತ್ವದಲ್ಲಿ ಎಸ್ಸೈಗಳಾದ ರಾಘವೇಂದ್ರ ಸಿ, ಅಕ್ಷಯ ಕುಮಾರಿ, ಎಎಸ್ಸೈ ವಿವೇಕಾನಂದ ಬಿ., ಸಿಬ್ಬಂದಿ ಅಬ್ದುಲ್ ರಜಾಕ್, ಚೆನ್ನೇಶ್, ಮಂಜುನಾಥ ಎಂ.ಆರ್., ಸುರೇಶ್ ಪಾಟೀಲ್, ಶುಭಾ ಈ ಕಾರ್ಯಾಚರಣೆ ನಡೆಸಿದ್ದಾರೆ.
‘ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ಗಳನ್ನು ಸಿಇಐಆರ್ ಪೋರ್ಟಲ್ನಲ್ಲಿ ನಮೂದಿಸಿದರೆ ಪತ್ತೆ ಮಾಡಲು ಪೊಲೀಸರಿಗೆ ಅನುಕೂಲವಾಗುತ್ತದೆ ಮತ್ತು ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ಗಳ ದುರ್ಬಳಕೆ ತಡೆ ಯಲು ಸಹಕಾರಿಯಾಗುತ್ತದೆ. ಆದುದರಿಂದ ಸಾರ್ವಜನಿಕರು ಮೊಬೈಲ್ ಕಳೆದುಕೊಂಡಲ್ಲಿ ಈ ಪೋರ್ಟಲ್ನಲ್ಲಿ ನಮೂದಿಸಬೇಕು’
–ಡಾ.ಕೆ.ಅರುಣ್, ಎಸ್ಪಿ, ಉಡುಪಿ”