ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರಿಡಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಒತ್ತಾಯ
ಉಡುಪಿ: ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರು ಇಡಬೇಕೆಂದು ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಜಯ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸದಾ ಅಭಿವೃದ್ದಿ ಪ್ರಗತಿಯ ಬಗ್ಗೆ ಚಿಂತಿಸುತ್ತಿದ್ದ ಜಾರ್ಜ್ ಫೆರ್ನಾಂಡಿಸ್ ಅವರು, ರೈಲ್ವೆ ಸಚಿವರಾಗಿದ್ದಾಗ ಕರಾವಳಿ-ಮುಂಬೈ ಗೆ ಬಾಂಧವ್ಯ ಬೆಸೆಯುವ ರೀತಿಯಲ್ಲಿ ಕೊಂಕಣ್ ರೈಲು ಸೇವೆ ಒದಗಿಸಿದ್ದರು. ಕಾರವಾರದ ಸೀ ಬರ್ಡ್ ಯೋಜನೆ ಹೀಗೆ ಹಲವು ಯೋಜನೆಯ ಮೂಲಕ ತನ್ನ ಛಾಪನ್ನು ಮೂಡಿಸಿರುವ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಸಮಿತಿಯು 2019ರಲ್ಲಿ ಅಂದಿನ ಗೃಹ ಸಚಿವ
ರಾಜನಾಥ್ ಸಿಂಗ್, ಅಮಿತ್ ಶಾ ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಅವರು ಕೂಡ ಸಮಿತಿಯ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದರು. ಅಲ್ಲದೆ, ಅಂದು ವಿಪಕ್ಷ ನಾಯಕರಾಗಿದ್ದ ಇಂದಿನ ಸಿಎಂ ಸಿದ್ದರಾಮಯ್ಯನವರು ಕೂಡ ಸಮಿತಿಯ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಈಗ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜಾರ್ಜ್ ಫೆರ್ನಾಂಡಿಸ್ ಹೆಸರನ್ನು ಕಡೆಗಣಿಸಬಾರದು ಎಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಪ್ರಕಾಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಉಪಸ್ಥಿತರಿದ್ದರು.