ನಾಳೆ (ಡಿ.17) ‘ಸಿರಿತುಪ್ಪೆ’ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ 80ರ ಸಂಭ್ರಮ
ಉಡುಪಿ: ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ 80ರ ಸಂಭ್ರಮ ‘ಸಿರಿತುಪ್ಪೆ’ ಸಮಾರಂಭವನ್ನು ಡಿ.17ರಂದು ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಾಬು ಅಮೀನ್ 80 ಅಭಿನಂದನಾ ಸಮಿತಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8.45ರಿಂದ ಗುರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಹಿದಾಯತುಲ್ಲ ಸಾಹೇಬ್ ಎರ್ಮಾಳು ಅವರಿಂದ ನಾಗಸ್ವರ ವಾದನ, ರವಿಕುಮಾರ್ ಕಪ್ಪೆಟ್ಟುರವರ ಡೋಲು ವಾದನ, ಏಡ್ಮೇರಿನ ಬೊಗ್ಗು ಪರವರಿಂದ ತುಳು ಪಾಡ್ದನದ ನಂತರ ಬೆಳಗ್ಗೆ 10 ಗಂಟೆಗೆ ಶ್ಯಾಮಿಲಿ ಸಮೂಹ ಸಂಸ್ಥೆಗಳ ಪ್ರವರ್ತಕ ಜಿ.ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ಹಿರಿಯ ಸಾಹಿತಿ ರೋಹಿಣಿ ಬಿ.ಎಂ. ಬನ್ನಂಜೆಯವರ ‘ತುಳುನಾಡ ಸುತ್ತ ಮುತ್ತ’ ಹಾಗೂ ‘ಗರೋಡಿ ಒಂದು ಚಿಂತನೆ’ ಪುಸ್ತಕ ಬಿಡುಗಡೆಯಾಗಲಿದೆ. ಬೆಳಿಗ್ಗೆ 10.30 ಕ್ಕೆ ಬನ್ನಂಜೆಯವರ ಸಮಗ್ರ ಸಾಹಿತ್ಯ ಹಾಗೂ ಜನಪದ ಆಚರಣೆ ಸಂಕಥನಗಳ ಬಗ್ಗೆ ವಿಚಾರಗೋಷ್ಠಿ ಮತ್ತು ಮಧ್ಯಾಹ್ನ 1.30ಕ್ಕೆ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ಆರಾಧನಗೋಷ್ಠಿ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಪ್ರೊ.ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಅಭಿನಂದನಾ ಕಾರ್ಯಕ್ರಮವು ನಡೆಯಲಿದ್ದು, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿನಂದನಾ ಭಾಷಣ ಮಾಡಲಿದ್ದಾರೆ. ಕುದ್ರೋಳಿ ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್. ‘ಸಿರಿ ಕುರಲ್’ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಇತರೆ ಸಂಘ ಸಂಸ್ಥೆಗಳ ಹಾಗೂ ಹಿತೈಷಿಗಳ ಅಭಿನಂದನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 11.45 ಕ್ಕೆ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಪ್ರಬುದ್ದ ಕಲಾವಿದರಿಂದ ಸುದರ್ಶನ ವಿಜಯ ಎಂಬ ಯಕ್ಷಗಾನ ಮತ್ತು ಮಧ್ಯಾಹ್ನ 2.45ಕ್ಕೆ ಬನ್ನಂಜೆಯವರ ಜೀವನಗಾಥೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ರಘುನಾಥ ಮಾಬಿಯಾನ್, ಕಾರ್ಯದರ್ಶಿ ಪಾಂಡು ಕೋಟ್ಯಾನ್, ಸಂಚಾಲಕ ಭಾಸ್ಕರ್ ಸುವರ್ಣ ಕನ್ನರ್ಪಾಡಿ, ಮಹೇಶ್ ಸುವರ್ಣ, ದಯಾನಂದ ಕರ್ಕೇರ ಉಪಸ್ಥಿತರಿದ್ದರು.