ವೃದ್ದೆಯ ಬಾಳಿಗೆ ದೊರಕಿತು ನೆಮ್ಮದಿಯ ಸೂರು ‘ಗೃಹಲಕ್ಷ್ಮಿ’…!
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಇವರ ವತಿಯಿಂದ ಹೀಗೊಂದು ಜನ-ಮನ್ನಣೆಯ ನಡೆ..
ಪೆರ್ಡೂರು ಗ್ರಾಮದ ಬಾಳೆಬೈಲು ಕಾಲನಿಯ ನಿವಾಸಿ ಗುಲಾಬಿ ಶೇರಿಗಾರ್ 76ರ ವಯಸ್ಸಿನ ಹಿರಿಯ ಜೀವಿ. ಗಂಡ, ಮಕ್ಕಳು ಬಂದು-ಬಾಂದವರೆಂಬ ಯಾವ ಕೌಟುಂಬಿಕ ಕೊಂಡಿಗಳೇ ಇಲ್ಲದ ಬದುಕು ಸವೆಸುತ್ತಿರುವ ಒಂಟಿ ಜೀವ. ಕೆಲ ವರ್ಷಗಳ ಹಿಂದೇ ಮಾನವೀಯ ನೆಲೆಯಲ್ಲಿ ಕಾಂಗ್ರೆಸ್ ಸರಕಾರ ಕೊಡಮಾಡಿದ ಐದು ಸೆಂಟ್ಸ್ ಜಾಗದಲ್ಲಿ ಪುಟ್ಟ ಮನೆಯನ್ನು ಕಟ್ಟಿಕೊಂಡು ಹೇಗೂ ಬದುಕು ನಡೆಸುತ್ತಿದ್ದರು. ಆದರೆ ಮಳೆ-ಗಾಳಿಗೆ ನೆನೆದ ಆ ಪುಟ್ಟ ಬಿಡಾರ ಒಂದು ದಿನ ಧರೆಗುರುಳಿತು.
ಒಂಟಿ ಜೀವ ಗುಲಾಬಿಯವರ ಬದುಕು ಬೀದಿಗೆ ಬಿದ್ದಿತು. ಇದನ್ನು ಕಂಡ ಮರುಗಿದ ಪೆರ್ಡೂರಿನ ಸಜ್ಜನ ವ್ಯಕ್ತಿಯೊಬ್ಬರು ಮಾನವೀಯ ನೆಲೆಯಲ್ಲಿ ತಮ್ಮ ಬಾಡಿಗೆ ಕಟ್ಟಡದ ಒಂದು ರೂಮನ್ನು ಆ ವೃದ್ದೆಗೆ ಇರಲು ಬಿಟ್ಟು ಕೊಟ್ಟರು. ಒಂದು ಪೈಸೆ ಬಾಡಿಗೆಯನ್ನು ಪಡೆಯದೇ ಸುಮಾರು ಸಮಯ ಆ ಒಂಟಿ ಜೀವಕ್ಕೆ ನೆರವಿನ ಆಶ್ರಯವನ್ನಿತ್ತರು.
ಈ ವೃದ್ದೆಯ ಕರುಣಾಜನಕ ಪರಿಸ್ಥಿತಿಯನ್ನು ಕಂಡ ಮಾನವೀಯ ಅಂತಕರಣದ 8 ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರು ಆ ವೃದ್ದೆಯ ಬಾಳಿಗೆ ನೆಮ್ಮದಿಯ ಸೂರು ನಿರ್ಮಿಸಿಕೊಡುವ ಭರವಸೆ ನೀಡಿದ್ದರು.
ಕಾಂಗ್ರೇಸ್ ಮುಖಂಡ ಶಾಂತರಾಮ ಸೂಡ ಮತ್ತು ಕಾಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ್ ಕುಲಾಲ್ ಅವರ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವತ್ತರಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರ ಜೊತೆ ಚರ್ಚಿಸಿ ವೃದ್ದೆಯ ಬಾಳಿಗೆ ನೆಮ್ಮದಿಯ ಸೂರು ನಿರ್ಮಿಸಿಕೊಡುವ ದೀಕ್ಷೆಯನ್ನು ಹೊತ್ತು ನಿಂತರು. ಈ ಮಾನವೀಯ ಕಾರ್ಯಕ್ಕೆ ಸಮಾಜದ ಸಮಾಜದ ಅನೇಕ ಸಜ್ಜನ ದಾನಿಗಳು ನೆರವಿನ ಸಹಾಯಹಸ್ತ ಚಾಚಿದರು. ಒಟ್ಟಾದ ಪೈಸೆ ಪೈಸೆಯನ್ನು ಲೆಕ್ಕವಿರಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲರ ಮುಂದಾಳತ್ವದಲ್ಲಿ ಗುಲಾಬಿ ಶೇರಿಗಾರರಿಗೆ ಅವರ ಐದು ಸೆಂಟ್ಸ್ ಜಾಗದಲ್ಲಿ ಉತ್ಕೃಷ್ಟ ಗುಣಮಟ್ಟದ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಗಿದೆ.
ರಾಜ್ಯದಲ್ಲಿ ಪ್ರಸ್ತುತ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರಕಾರ ಸ್ಥಳೀಯ ಮಟ್ಟದಲ್ಲೂ ಇದೇ ಬದ್ದತೆಯನ್ನು ಪ್ರದರ್ಶಿಸಿರುವುದು ವಿಶೇಷ. ಗುಲಾಬಿ ಶೇರಿಗಾರರ ನೆಮ್ಮದಿಯ ಸೂರಿಗೆ ಸರಕಾರದ ಜನಪ್ರೀಯ ಯೋಜನೆ `ಗೃಹಲಕ್ಷ್ಮಿ’ ಹೆಸರನ್ನೇ ಇರಿಸಿರುವುದು ಇನ್ನೊಂದು ವಿಶೇಷ...
ನಮ್ಮ ಸಮಾಜದಲ್ಲಿ ಮಾನವೀಯ ಸಂಬಂಧಗಳು ನಶಿಸುತ್ತಿವೆ; ಬಡವರ ಬದುಕು ಕಷ್ಟವಾಗುತ್ತಿದೆ’ ಎಂಬ ಅಪವಾದ ಇರುವ ಈ ಕಾಲದಲ್ಲಿ ಬದುಕಿನ ಇಳಿ ಸಂಜೆಯಲ್ಲಿರುವ ಪೆರ್ಡೂರಿನ ವೃದ್ದೆಯ ಮೊಗದಲ್ಲಿ ನೆಮ್ಮದಿಯ ನಗು ಮೂಡಿಸಿದ ಕಾಪು ಬ್ಲಾಕ್ ಕಾಂಗ್ರೆಸ್ಗೆ ಪಕ್ಷಬೇಧ ಮರೆತು ಸಜ್ಜನ ನಾಗರಿಕರೆಲ್ಲರೂ ಶತಕೋಟಿ ಕೃತಜ್ಣತೆಯನ್ನು ಸಮರ್ಪಿಸುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ಸೊರಕೆಯವರು, ಶಾಂತರಾಮ ಸೂಡ, ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಗ್ರಾಮೀಣ ಅಧ್ಯಕ್ಷರಾದ ದಿನೇಶ್ ಪೂಜಾರಿ, ಪ್ರಮೋದ್ ರೈ, ರಾಮದಾಸ್ ನಾಯ್ಕ, ಬೂತ್ ಅದ್ಯಕ್ಷರಾದ ಶರತ್ ಶೆಟ್ಟಿ ಹಾಗೂ ಪಂಚಾಯತ್ ಸದಸ್ಯರಾದ ಶೋಭ ಗಾಂಸ್, ಉದಯ ಕುಲಾಲ್, ಸುರೇಶ್ ಕುಲಾಲ್, ವಿನೋದ್ ಶೇಟ್ ಉಪಸ್ತಿತರಿದ್ದರು.