ಬೆಳಗಾವಿ ಮಹಿಳೆ ಬೆತ್ತಲೆ ಘಟನೆ ‘ನಾಚಿಕೆಗೇಡು’, ಜಿಪಿ ನಡ್ಡಾ ಖಂಡನೆ- ಸತ್ಯ ಶೋಧನಾ ಸಮಿತಿ ರಚನೆ
ನವದೆಹಲಿ: ಬೆಳಗಾವಿ ದಲಿತ ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಥಳಿಸಿರುವ ಘಟನೆ ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ಖಂಡಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ವಿರುದ್ಧ ಇಂತಹ ಘೋರ ಅಪರಾಧಗಳು ನಿಯಮಿತವಾಗಿ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಘಟನೆ ನಡೆದ ಗ್ರಾಮಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ಪಕ್ಷದ ಮಹಿಳಾ ಸಂಸದರನ್ನು ಒಳಗೊಂಡ ಐವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ಅವರು ರಚಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿ. 11 ರಂದು ಬೆಳಗಾವಿ ಜಿಲ್ಲೆಯ ವಂಟಮುರಿ ಗ್ರಾಮದಲ್ಲಿ ಯುವಕನೊಬ್ಬ ತಾನು ಪ್ರೇಮಿಸಿದ್ದ ಯುವತಿಯ ಜೊತೆ ಪರಾರಿಯಾಗಿದ್ದ. ಇದರಿಂದ ಆಕ್ರೋಶಗೊಂಡ ಯುವತಿ ಸಂಬಂಧಿಕರು ಯುವಕನ ತಾಯಿಯನ್ನು ಬೆತ್ತಲೆ ಮಾಡಿ ಆಕೆಯನ್ನು ಸಾರ್ವಜನಿಕವಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ ಎಂಟು ಮಂದಿಗಾಗಿ ಶೋಧ ನಡೆಯುತ್ತಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದೆ.
ಬುಡಕಟ್ಟು ಮಹಿಳೆಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಹೇಯ ಘಟನೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ತೀವ್ರವಾಗಿ ಖಂಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಘೋರ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಅಪರಾಧಗಳನ್ನು ನಿಭಾಯಿಸುವಲ್ಲಿ ದೇಶದೆಲ್ಲೆಡೆ ವಿಫಲವಾಗಿರುವ ‘ಕಾಂಗ್ರೆಸ್ ಸರ್ಕಾರಗಳ ಬೇಜವಾಬ್ದಾರಿ ವರ್ತನೆ ಯನ್ನು ಈ ಘಟನೆ ಎತ್ತಿ ತೋರಿಸಿದೆ ಎಂದು ಅರುಣ್ ಸಿಂಗ್ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
ಘಟನೆ ವಿರೋಧಿಸಿ ಕರ್ನಾಟಕದ ಬಿಜೆಪಿ ಸಂಸದರು ಶುಕ್ರವಾರ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ವಿನಾಕಾರಣ ಎಸ್‌ಸಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಸ್ ಸಿ, ಎಸ್ ಟಿ ಮಹಿಳೆಯರಿಗೆ ಭದ್ರತೆ ನೀಡುತ್ತಿಲ್ಲ ಎಂದು ಬಿಜೆಪಿ ನಾಯಕ ಡಿ.ವಿ. ಸದಾನಂದಗೌಡ ಆರೋಪಿಸಿದ್ದಾರೆ.
ಐವರು ಸದಸ್ಯರ ಸತ್ಯಶೋಧನಾ ಸಮಿತಿಯಲ್ಲಿ ಬಿಜೆಪಿ ಸಂಸದರಾದ ಅಪ್ರಜಿತಾ ಸಾರಂಗಿ, ಸುನೀತಾ ದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಾ ಕೋಲಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಇದ್ದಾರೆ. ಸಮಿತಿಯು ತನ್ನ ವರದಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಆದಷ್ಟು ಬೇಗ ಸಲ್ಲಿಸಲಿದೆ ಎಂದು ಸಿಂಗ್ ಹೇಳಿದ್ದಾರೆ.
ಬೆಳಗಾವಿ ಘಟನೆಯನ್ನು ಖಂಡಿಸಿ ಡಿಸೆಂಬರ್ 16 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಎಂಟು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿರುವುದರಿಂದ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಆಸ್ಪತ್ರೆಯಲ್ಲಿ ಬದುಕುಳಿದವರನ್ನು ಭೇಟಿ ಮಾಡಿಲ್ಲ ಎಂದು ಆರೋಪಿಸಿದರು.