ವಿಧಾನಸಭೆ: ವಕೀಲರ ಮೇಲಿನ ಹಿಂಸಾಚಾರ ನಿಷೇಧ ಮಸೂದೆ ಅಂಗೀಕಾರ
ಬೆಳಗಾವಿ: ನ್ಯಾಯವಾದಿಗಳು ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲು ಹಾಗೂ ಅವರ ಮೇಲಿನ ಹಿಂಸೆಯನ್ನು ನಿಷೇಧಿಸಲು ಹಾಗೂ ಅವರಿಗೆ ರಕ್ಷಣೆ ಒದಗಿಸಲು ಅವಕಾಶ ಕಲ್ಪಿಸಿರುವ 2023ನೇ ಸಾಲಿನ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಗುರುವಾರ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಅವರಿಗೆ ಕಾನೂನಾತ್ಮಕ ರಕ್ಷಣೆ ಅವಶ್ಯಕತೆ ಇದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿದೆ. ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಪೊಲೀಸರ ರೀತಿ, ವಕೀಲರು ಮುಖ್ಯ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಳೆದ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ವಕೀಲರು ಪ್ರತಿಭಟನೆ ನಡೆಸಿದಾಗ ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ಆಗ ನಾನೇ ಹೋಗಿ ವಕೀಲರಿಂದ ಮನವಿ ಪಡೆದಿದ್ದೆ. ವಕೀಲರ ಮೇಲೆ ಹಲ್ಲೆಯಾದಾಗ, ಅವರಿಂದ ಬೇರೆಯವರ ಮೇಲೆ ಹಲ್ಲೆಯಾದಾಗ ಏನು ಮಾಡಬೇಕು? ಈ ಬಗ್ಗೆ ಕಾನೂನು ತೊಡಕಾಗದಂತೆ ಬಹಳ ಎಚ್ಚರ ವಹಿಸಬೇಕು ಎಂದರು.
ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್ ಮಾತನಾಡಿ, ವಕೀಲರ ಮೇಲೆ ಹಲ್ಲೆ ಮಾಡಿದರೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿದ್ದೀರಾ? ಒಂದು ವೇಳೆ ವಕೀಲರು ಮುಂದೆ ಪ್ರಾಕ್ಟೀಸ್ ಮಾಡಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಎದುರಾದರೆ ಅವರಿಗೆ ಪರಿಹಾರ ಕೊಡಬೇಕು ಎಂದು ತಿಳಿಸಿದ್ದೀರಾ? ಯಾವ ರೀತಿ ವಕೀಲರ ನೆರವಿಗೆ ಧಾವಿಸುತ್ತೀರಾ ಎಂಬುದರ ಕುರಿತು ಸ್ಪಷ್ಟಣೆ ನಿಡುವಂತೆ ಕೋರಿದರು.
ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣ ಮಾತನಾಡಿ, ವಕೀಲರ ಮೇಲೆ ಹಲ್ಲೆ ನಡೆಸುವವರಿಗೆ ರಾಜಸ್ಥಾನದಲ್ಲಿರುವಂತೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ 1.24 ಲಕ್ಷ ವಕೀಲರು ಇದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ಸಂಬಂಧ ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ನೀಡಿರುವ ನಿರ್ದೇಶನದಲ್ಲಿ ‘ವಕೀಲರನ್ನು ಬಂಧಿಸಿದಾಗ ಪೊಲೀಸರು 24 ಗಂಟೆಯೊಳಗೆ ಬಾರ್ ಕೌನ್ಸಿಲ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದೆ’. ಈ ವಿಚಾರವನ್ನು ಸರಕಾರ ಗಮನಿಸಬೇಕು ಎಂದರು.