ಮಲ್ಪೆ: ಬೀಚ್‌ನ ಹೊಟೇಲ್‌ಗಳಿಗೆ ಪೌರಾಯುಕ್ತರ ನೇತೃತ್ವದ ಅಧಿಕಾರಿಗಳ ತಂಡ ದಾಳಿ

ಉಡುಪಿ, ಡಿ.14(ಉಡುಪಿ ಟೈಮ್ಸ್ ವರದಿ): ಮೀನಿನ ಆಹಾರ ಖಾದ್ಯಗಳಿಗೆ ಕೃತಕ ಬಣ್ಣ ಹಾಗೂ ರುಚಿ ಬರುವ ರಾಸಾಯನಿಕ ಸೇರಿಸಿ ಮಾರಾಟ ಮಾಡುತ್ತಿರುವ ದೂರಿನ ಅನ್ವಯ ನಗರ ಸಭಾ ಪೌರಾಯುಕ್ತರ ನೇತೃತ್ವದಲ್ಲಿ ಮಲ್ಪೆ ಬೀಚ್‌ನ ಬಳಿಯ ಹೊಟೇಲ್‌ಗಳಿಗೆ ದಾಳಿ ನಡೆಸಲಾಗಿದೆ.

ಮಲ್ಪೆ ಬೀಚ್ ಸುತ್ತಮುತ್ತಲು ಇಪ್ಪತ್ತಕ್ಕೂ ಹೆಚ್ಚು ಮೀನಿನ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳಿದ್ದು, ಇಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ರಸ್ತೆಯಂಚಿನಲ್ಲಿ ಮೀನಿನ ಫ್ರೈ, ಮಸಾಲ ಫ್ರೈ, ಚಿಕನ್ ಕಬಾಬ್, ಚೈನಿಸ್ ಫುಡ್‌ಗಳ ಮಾರಾಟ ಮಾಡುವ ಹೊಟೇಲ್‌‌ಗಳಿವೆ. ಇಲ್ಲಿನ ಹೆಚ್ಚಿನ ಹೊಟೇಲ್‌ಗಳಲ್ಲಿ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ, ಅತೀಯಾದ ರುಚಿ ಬರುವ ರಾಸಾಯನಿಕ ಬೆರೆಸಿ ತಯಾರು ಮಾಡುತ್ತಾರೆ ಎಂದು‌ ಪ್ರವಾಸಿಗರು‌ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಯವರು ತಕ್ಷಣ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಉಡುಪಿ ನಗರ ಸಭಾ ಪೌರಾಯುಕ್ತರಿಗೆ ದಾಳಿ ನಡೆಸಿ ಪರಿಶೀಲಿಸಲು ನಿರ್ದೇಶನ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ನಗರಸಭೆಯ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ್ದಾರೆ.

ದಾಳಿ‌ ಸಂದರ್ಭದಲ್ಲಿ ಹೆಚ್ಚಿನ ಹೊಟೇಲ್‌ಗಳಲ್ಲಿ ಮಾನವನ‌ ಜೀವಕ್ಕೆ ಹಾನಿಕಾರಕವಾಗುವ ಕೃತಕ ಬಣ್ಣ ಹಾಗೂ ಅಜಿನಮೊಟೊ ಬಳಸುತ್ತಿರುವುದು‌ ಕಂಡು‌ ಬಂದಿದೆ.

ಈ ಬಗ್ಗೆ ಹೊಟೇಲ್ ಮಾಲಕರಿಗೆ ಎಚ್ಚರಿಕೆ ನೀಡಿದ ಪೌರಾಯುಕ್ತರು ಇನ್ನು ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳಿಗೆ ವಿಷಯುಕ್ತ ಬಣ್ಣ, ಟೆಸ್ಟೀ ಪೌಡರ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಮುಂದೆ ಪ್ರತಿನಿತ್ಯ ಇದರ ಬಗ್ಗೆ ನಿಗಾ ವಹಿಸುತ್ತೇವೆ. ಮತ್ತೊಮ್ಮೆ ಈ ರೀತಿ ಕಂಡುಬಂದರೆ ಹೊಟೇಲ್‌ನ್ನೇ ಮುಚ್ಚಿ ಕಾನೂನು ರೀತ್ಯಾ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಅದೇ ರೀತಿ ಏಕಬಳಕೆಯ ಪ್ಲಾಸ್ಟಿಕ್ ಉಪಯೋಗಿಸದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬೀಚ್ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ರಹಿತ ಇರುವಂತೆ ನೋಡಿಕೊಳ್ಳುವಂತೆ ಸಲಹೆಗಳನ್ನು ನೀಡಿದರು.

Leave a Reply

Your email address will not be published. Required fields are marked *

error: Content is protected !!