ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ: ಹಳೆ ವಿದ್ಯಾರ್ಥಿಗಳಿಂದ ಡಿ.23ಕ್ಕೆ ‘ಅಮೃತ ಸಂಗಮ’
ಉಡುಪಿ: ಜಿಲ್ಲೆಯ ಹೆಸರಾಂತ ಕಾಲೇಜುಗಳಲ್ಲಿ ಒಂದಾದ ಉಡುಪಿ ಎಂಜಿಎಂ ಕಾಲೇಜಿಗೆ 2023-24 ನೇ ಶೈಕ್ಷಣಿಕ ವರ್ಷದಲ್ಲಿ 75 ವರ್ಷ ಪೂರ್ಣಗೊಳ್ಳಲಿದ್ದು, ಅಮೃತ ಮಹೋತ್ಸವವನ್ನಾಚರಿಸುತ್ತಿದೆ. ಹೀಗಾಗಿ ಕಾಲೇಜಿನ ಸಮಸ್ತ ಹಳೆವಿದ್ಯಾರ್ಥಿಗಳು ಒಟ್ಟು ಸೇರಿ ಇದೇ ಡಿ.23 ರಂದು ಹಳೆವಿದ್ಯಾರ್ಥಿ ಸಮಾವೇಶ ‘ಅಮೃತ ಸಂಗಮ’ ವನ್ನು ಸಡಗರದಿಂದ ಆಚರಿಸಲು ನಿರ್ಧರಿಸಿದ್ದಾರೆ ಎಂದು ಕಾರ್ಯಕ್ರಮದ ಪ್ರಧಾನ ಸಂಘಟಕ ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ. ಎಲ್.ಸಾಮಗ ತಿಳಿಸಿದ್ದಾರೆ.
ಅಮೃತ ಸಂಗಮ ಕಾರ್ಯಕ್ರಮದ ಕುರಿತು ವಿವರಿಸಲು ಕರೆದ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಬಳಿಕ ಅವರು ಮಾತನಾಡುತಿದ್ದರು. ಕಾಲೇಜು ಸ್ಥಾಪನೆಗೊಂಡ 1949ರಿಂದ ಇದುವರೆಗಿನ ಎಲ್ಲಾ ಹಳೆ ವಿದ್ಯಾರ್ಥಿಗಳು ಸೇರಿ ಒಂದು ದಿನದ ಸಂಭ್ರಮ, ಸಡಗರವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಿದ್ದಾರೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕನೇ ಹಾಗೂ ಉಡುಪಿಯ ಮೊತ್ತಮೊದಲ ಕಾಲೇಜಾಗಿ 1949ರಲ್ಲಿ ಮಣಿಪಾಲದ ಬ್ರಹ್ಮನೆಂದೇ ಖ್ಯಾತರಾದ ಡಾ.ಟಿಎಂಎ ಪೈ ಅವರಿಂದ ಸ್ಥಾಪನೆಗೊಂಡ ಉಡುಪಿಯ ಮಹಾತ್ಮಗಾಂಧಿ ಮೆಮೋರಿಯನ್ ಕಾಲೇಜು (ಎಂಜಿಎಂ ಕಾಲೇಜು) ಇದೀಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ ಎಂದವರು ಹೇಳಿದರು.
ಎಂಜಿಎಂ ಕಾಲೇಜು 89 ವಿಗದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡಿದ್ದು, ಇದೀಗ ಇಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತಿದ್ದಾರೆ. ಈವರೆಗೆ 40ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಇಲ್ಲಿ ಕಲಿತು ತೆರಳಿದ್ದಾರೆ. ಇವರಲ್ಲಿ ಸುಮಾರು 5000 ಮಂದಿ ಅಮೃತ ಸಂಗಮ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರಸ್ತುತ ಎಂಜಿಎಂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ, ಕಾಲೇಜಿನ ಮಾಜಿ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ತಿಳಿಸಿದರು.
ಡಿ.23ರ ಶನಿವಾರ ಬೆಳಗ್ಗೆ 9:30ಕ್ಕೆ ಡಾ.ಟಿಎಂಎ ಪೈ ಪುತ್ಥಳಿಗೆ ಗೌರವಾರ್ಪಣೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಹಳೆ ವಿದ್ಯಾರ್ಥಿಗಳ ಕಾಲೇಜು ಬದುಕನ್ನು ನೆನಪಿಸುವ ಪೋಟೊ ಗ್ಯಾಲರಿ ಪ್ರದರ್ಶನ ಉದ್ಘಾಟನೆ ಹಾಗೂ ಅಮೃತ ಸಂಗಮದ ಉದ್ಘಾಟನೆ 10ಗಂಟೆಗೆ ನಡೆಯಲಿದೆ ಎಂದರು.
ಬಳಿಕ ಹಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಆಟೋಟಗಳ ಪ್ರತಿಭಾ ಪ್ರದರ್ಶನದ ಅನಾವರಣ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಅಪರಾಹ್ನ 2:30ಕ್ಕೆ ಮುದ್ದಣ ಮಂಟಪದಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಂಗಮ ನಡೆಯಲಿದೆ. ಅಕಾಡೆಮಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಶ್ರೀಶ ಆಚಾರ್ಯ, ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿಗಳಾದ ಸಂಜಯ ಹೆಗ್ಡೆ ಹಾಗೂ ಮಾಹೆಯ ಡಾ.ಆನಂದ ವೇಣುಗೋಪಾಲ ಅವರು ಉಪಸ್ಥಿತರಿರುವರು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ನಿವೃತ್ತ ಪ್ರಾಧ್ಯಾಪಕರು ಹಾಗೂ ನಿವೃತ್ತ ಶಿಕ್ಷಕೇತರ ಸಿಬ್ಬಂದಿಗಳನ್ನು ಹಾಗೂ 1949ರಿಂದ 1970ರ ಅವಧಿಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಪ್ರೊ.ಸಾಮಗ ತಿಳಿಸಿದರು. ಬಳಿಕ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯತೆ ಇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ನ ವಿಶ್ವಸ್ಥ ಬಿ.ಪಿ.ವರದರಾಯ ಪ್ರಭು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್, ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾಲತಿ ದೇವಿ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ.ಎಂ.ವಿಶ್ವನಾಥ ಪೈ, ಖಜಾಂಚಿ ದೀಪಾಲಿ ಕಾಮತ್ ಉಪಸ್ಥಿತರಿದ್ದರು.