ಮರ್ಯಾದೆಗೆ ಅಂಜಿ ನೇಣಿಗೆ ಕೊರಳೊಡ್ಡಿದ ಸಮಾಜ ರತ್ನ ಲೀಲಾಧರ್ ಶೆಟ್ಟಿ ದಂಪತಿ
ಕಾಪು: ಸಮಾಜದ ನಾನಾ ಸಮಸ್ಯೆಗಳಿಗೆ ಹೆಗಲಿಗೆ ಹೆಗಲು ಕೊಟ್ಟು, ರಾತ್ರಿ ಹಗಲು ಲೆಕ್ಕಿಸದೇ, ಬಡವರ ಕಷ್ಟಕ್ಕೆ ಮಿಡಿಯುತ್ತಿದ್ದ ಹೃದಯ ಶ್ರೀಮಂತಿಕೆಯ ಸಾಮ್ರಾಟ್, ತನ್ನ ಪ್ರತಿಯೊಂದು ನಾಟಕದಲ್ಲೂ ಸಾಮಾಜಿಕ ಕಳಕಳಿಯ ಚಿಂತನೆವುಳ್ಳ, ಧೀಮಂತ ನಾಯಕ, ಅದಮ್ಯ ಚೇತನ ಲೀಲಾಧರ್ ಶೆಟ್ಟಿ ಅವರು ಇನ್ನಿಲ್ಲ ಎನ್ನುವುದು ಅವರ ಅಪಾರ ಅಭಿಮಾನಿಗಳಿಗೆ ದಿಗ್ಬ್ರಮೆ ಉಂಟುಮಾಡಿದೆ.
ಸಮಾಜದ ಅಂಜಿಕೆಗೆ ಹೆದರಿ ಪತ್ನಿಯೊಂದಿಗೆ ಒಂದೇ ಸೀರೆಯ ಕುಣಿಕೆಗೆ ಅವರು ಕೊರಳೊಡ್ಡಿ ಇಹಲೋಕ ತ್ಯಜಿಸಿದ್ದಾರೆ. ಆರೋಗ್ಯವಂತರಾಗಿದ್ದ ಇವರ ಅಕಾಲಿಕವಾಗಿ ಮರಣದ ಸುದ್ದಿ ಸಹಸ್ರಾರು ಸಂಖ್ಯೆಯ ಕಲಾಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ತಮ್ಮ ದತ್ತು ಪುತ್ರಿಯ ದುಡುಕಿನ ನಿರ್ಧಾರದಿಂದ ಮನನೊಂದ ಲೀಲಾಧರ್ ಶೆಟ್ಟಿ ಅವರು ಡೆತ್ ನೋಟ್ ಬರೆದು ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಅವರ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.
ಸಮಾಜದ ಹಲವಾರು ಸಮಸ್ಯೆಗಳಿಗೆ ನಗುಮೊಗದಿಂದಲೇ ಸ್ಪಂದಿಸುತ್ತಿದ್ದ ಇವರು, ಮರಣ ಪೂರ್ವ ಡೆತ್ ನೋಟ್ ನಲ್ಲೂ ಸಮಾಜದ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ವಿನಮ್ರತೆಯಿಂದ ಬರೆದುಕೊಂಡಿದ್ದಾರೆ.
ಯುವ ಪೀಳಿಗೆಗೆ ಬುದ್ದಿವಾದ ಹೇಳಿ ಸರಿ ದಾರಿಗೆ ತರುವಲ್ಲಿ ಪ್ರಯತ್ನಿಸುತ್ತಿದ್ದ ಲೀಲಾಧರ್ ಅವರು ಯುವಜನತೆಯಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನನ್ನು ಕ್ಷಮಿಸಿ ಎಂದು ಬರೆದುಕೊಂಡು ಉಸಿರನ್ನು ಚೆಲ್ಲಿದ್ದಾರೆ.
ಲೀಲಾಧರ್ ಶೆಟ್ಟಿ ಅವರ ಅಂತಿಮ ಕ್ರಿಯೆಯ ಮೊದಲು ಕಾಪು ಪೇಟೆಯಿಂದ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಅಂತಿಮ ನಮನ ಸಲ್ಲಿಕೆಯಾಗಿದ್ದು, ದೊಡ್ಡ ಮಟ್ಟದಲ್ಲಿ ಅಂತ್ಯಕ್ರಿಯೆಯ ಮೆರವಣಿಗೆ ನಡೆದಿತ್ತು.
ಜಾತಿ ಮತ ಭೇದವಿಲ್ಲದೆ ಧಾರ್ಮಿಕ ರಾಜಕೀಯ ಮುಂದಾಳುಗಳು ಮಾತ್ರವಲ್ಲದೆ ಸಾರ್ವಜನಿಕರು ಕಣ್ಣೀರ ಧಾರೆ ಸುರಿಸುತ್ತಿದ್ದು ಲೀಲಾಧರ ಶೆಟ್ಟಿ ಅವರ ಅಭಿಮಾನಕ್ಕೆ ಸಾಕ್ಷಿ.
ಅಂತಿಮ ಕ್ರಿಯೆಯ ಮೆರವಣಿಯುವುದಕ್ಕೂ ಕಾಪು ಶಾಸಕ ಸುರೇಶ್ ಶೆಟ್ಟಿ, ಗುರ್ಮೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪ್ರಮುಖರಾದ ಮಟ್ಟರ್ ರತ್ನಾಕರ ಹೆಗ್ಡೆ, ಯೋಗೀಶ್ ಶೆಟ್ಟಿ ಬಾಲಾಜಿ, ರಂಗ ತರಂಗ ಕಲಾವಿದರು, ವಿವಿಧ ರಾಜಕೀಯ ಧಾರ್ಮಿಕ ಮುಖಂಡರುಗಳು, ಕಲಾವಿದರು ಹಾಗೂ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.