ಕಾಪು ಸಮಾಜ ಸೇವಕ ಲೀಲಾಧರ್ ಶೆಟ್ಟಿ ದಂಪತಿ ಆತ್ಮಹತ್ಯೆ
ಕಾಪು: ಹೆಸರಾಂತ ಸಮಾಜ ಸೇವಕ, ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ ಲೀಲಾಧರ ಶೆಟ್ಟಿ (68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ(58) ಜೊತೆಯಾಗಿ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ನಿನ್ನೆ ರಾತ್ರಿ ನಡೆದಿದೆ.
ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಮಂಗಳವಾರ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಸರಳ ಸಜ್ಜನ ವ್ಯಕ್ತಿಯಾಗಿದ್ದ ಲೀಲಾಧರ ಶೆಟ್ಟಿ ಅವರು ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಕಾಪು ರಂಗತರಂಗ ತಂಡದ ಯಜಮಾನ ಆಗಿ ಭಾರೀ ಜನಪ್ರಿಯತೆ ಪಡೆದಿದ್ದರು.
ಅಶಕ್ತರ ನೆರವಿಗೆ ಧಾವಿಸುವ ಅವರು ಯಾವಾಗಲೂ ಸಮಾಜದ ಪರವಾಗಿ ಕಾಳಜಿ ಹೊಂದಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಆತ್ಯಂತ ಆಪ್ತರಾಗಿದ್ದ ಅವರು ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕ, ಅತ್ಯುತ್ತಮ ನಟ ಮತ್ತು ನಿರ್ದೇಶಕ ಆಗಿದ್ದರು. ಅವರು ದಂಪತಿ ಸಹಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಸಾವಿರಾರು ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ.
ಇತ್ತೀಚೆಗೆ ತನ್ನ ಹೊಸ ನಾಟಕ ರಚನೆಯನ್ನು ಮಾಡಿದ್ದ ಇವರು ಅದರಲ್ಲಿ ಯಶಸ್ವಿಯಾಗುವ ಆಶಾಭಾವನೆ ಹೊಂದಿದ್ದರು. ಸ್ವಾಭಿಮಾನಿಯಾಗಿದ್ದ ಲೀಲಾಧರ್ ಶೆಟ್ಟಿಯವರು ಅಶಕ್ತರಿಗೆ, ಬಡವರಿಗೆ ತನ್ನ ಕೈಮೀರಿ ಸಹಾಯಹಸ್ತ ಮಾಡುತ್ತಿದ್ದ ಇವರು, ಇತ್ತೀಚಿನ ಕೆಲ ವರ್ಷಗಳಿಂದ ಹಣಕಾಸಿನ ತೊಂದರೆಯಲ್ಲಿದ್ದರು ಎನ್ನುವುದು ಅವರ ಆಪ್ತ ವಲಯದಿಂದ ಕೇಳಿಬಂದಿದೆ. ಮಾತ್ರವಲ್ಲದೆ ಪತ್ನಿ ವಸುಂಧರ ಶೆಟ್ಟಿ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು ಎನ್ನಲಾಗಿದೆ.
ಉಡುಪಿ,ಮಂಗಳೂರು ಭಾಗದಲ್ಲಿ ಸಾವಿರಾರು ನಾಟಕ ಕಲಾವಿದರನ್ನು ಸಮಾಜಕ್ಕೆ ನೀಡಿದ ಕೀರ್ತಿ ಲೀಲಾಧರ್ ಶೆಟ್ಟಿಯವರಿಗೆ ಸಲ್ಲುತ್ತದೆ .
ಇಂದು ಸಂಜೆ ಅಂತಿಮ ಸಂಸ್ಕಾರ: ಲೀಲಾಧರ ಶೆಟ್ಟಿ ಅವರ ಅಕಾಲಿಕ ಮರಣ ಕಾಪುವಿನ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ನೂರಾರು ಮಂದಿ ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು ಮನೆ ಮತ್ತು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು ಬುಧವಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.