ಡಿ.16: ಉಡುಪಿಯಲ್ಲಿ ‘ಕಲಾಸೌರಭ-2’ ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಪ್ರತಿಭೆ ಅನಾವರಣ ಸ್ಪರ್ಧೆ
ಜಿಲ್ಲೆಯಾದ್ಯಂತ 15 ವಿಶೇಷ ಶಾಲೆಗಳ 225 ವಿಶೇಷ ಮಕ್ಕಳು ಭಾಗಿ
ಉಡುಪಿ: ವಿಶೇಷ ಮಕ್ಕಳ ವಿಶೇಷ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ “ಕಲಾಸೌರಭ-2” ಎಂಬ ಶೀರ್ಷಿಕೆಯಡಿಯಲ್ಲಿ “ನಮ್ಮ ಕರಾವಳಿ ನಮ್ಮ ಹೆಮ್ಮೆ” ಎಂಬ ವಿಷಯದ ಮೇಲೆ ಜಿಲ್ಲಾಮಟ್ಟದ ವಿಶೇಷಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸುವ ಸ್ಪರ್ಧಾ ಕಾರ್ಯಕ್ರಮವನ್ನು ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಡಿ.16ರಂದು ಬೆಳ್ಳಿಗ್ಗೆ 9 ರಿಂದ ಸಂಜೆ 4.30 ರವರೆಗೆ ಆಯೋಜಿಸಲಾಗಿದೆ ಎಂದು ಮನೋವೈದ್ಯ ಡಾ. ಪಿ.ವಿ.ಭಂಡಾರಿ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಆಟಿಸಂ ಸೊಸೈಟಿ ಉಡುಪಿ, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಒನ್ ಗುಡ್ ಸ್ಟೆಪ್ ಸ್ವಯಂ ಸೇವಾ ಸಂಸ್ಥೆ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಉಡುಪಿಯ ವಿಶೇಷ ಶಾಲೆಗಳಿಗೆ ವೇದಿಕೆ ಕಲ್ಪಿಸಲು ಮೀಸಲಾಗಿರುವ ಏಕೈಕ ಕಾರ್ಯಕ್ರಮ ಇದಾಗಿದ್ದು, ಈ ವರ್ಷ ಜಿಲ್ಲೆಯಾದ್ಯಂತ 15 ವಿಶೇಷ ಶಾಲೆಗಳ 225 ವಿಶೇಷ ಮಕ್ಕಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ಆಟಿಸಂ ಸೊಸೈಟಿಯ ಅಮಿತಾ ಪೈ, ಶೃತಿ ಶೆಟ್ಟಿ, ಕೀರ್ತೇಶ್ ಎಸ್. ಉಪಸ್ಥಿತರಿದ್ದರು.