ನಾಲ್ವರ ಹತ್ಯೆ ಆರೋಪಿ ಪ್ರವೀಣ್ ಚೌಗುಲೆಗೆ ಹಲ್ಲೆಗೆ ಯತ್ನಿಸಿದ 11 ಮಂದಿಗೆ ನೋಟಿಸ್
ಉಡುಪಿ: ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿ ಪ್ರವೀಣ್ ಚೌಗಲೆ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ 11 ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಆರೋಪಿ 37 ವರ್ಷದ ಪ್ರವೀಣ್ ಅರುಣ್ ಚೌಗಲೆ, ಹಸೀನಾ (46), ಅಫ್ನಾನ್ (23), ಐನಾಜ್ (21) ಮತ್ತು ಅಸೀಮ್ (12) ಎಂಬುವವರನ್ನು ಉಡುಪಿ ನಗರ ಸಮೀಪದ ನೇಜಾರಿನ ಅವರ ನಿವಾಸದಲ್ಲಿ ಹತ್ಯೆ ಮಾಡಿದ್ದನು.
ನವೆಂಬರ್ 12 ರಂದು ಆಘಾತಕಾರಿ ಘಟನೆ ನಡೆದಿತ್ತು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಿಯಾಗಿರುವ ಆರೋಪಿ, ಐನಾಜ್ ಮೇಲಿನ ಪ್ರೀತಿ ಮತ್ತು ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳು ಈ ಘೋರ ಕೃತ್ಯ ಮಾಡಲು ಪ್ರೇರೇಪಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಪತ್ತೆಹಚ್ಚಿದ ನಂತರ ಪೊಲೀಸರು ನವೆಂಬರ್ 16 ರಂದು ಸಂತ್ರಸ್ತರ ನಿವಾಸಕ್ಕೆ ಕರೆತಂದಿದ್ದರು. ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ಆತನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಪೊಲೀಸರು ಬಹಳ ಕಷ್ಟಪಟ್ಟು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು ಮತ್ತು ಉದ್ರಿಕ್ತ ಗುಂಪನ್ನು ಹತ್ತಿಕ್ಕಲು ಲಾಠಿ ಚಾರ್ಜ್ ಮಾಡಬೇಕಾಯಿತು.
ಪೊಲೀಸರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆರೋಪಿ ಮೇಲೆ ಹಲ್ಲೆಗೆ ಯತ್ನಿಸಿದ 11 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಭೀಕರ ಘಟನೆ ಕೋಮು ಸೂಕ್ಷ್ಮ ಕರಾವಳಿ ಪ್ರದೇಶದಲ್ಲಿ ಆತಂಕ ಮೂಡಿಸಿತ್ತು. ಹಿಂದೂ ವ್ಯಕ್ತಿಯಿಂದ ಮುಸ್ಲಿಂ ಕುಟುಂಬದವರ ಕೊಲೆ ಸಂಭ್ರಮಾಚರಣೆಗೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ‘ಆರೋಪಿಯನ್ನು ಪೊಲೀಸರು ಸಂತ್ರಸ್ತರ ನಿವಾಸಕ್ಕೆ ಕರೆತಂದಾಗ ಸ್ಥಳೀಯರು ಆತನ ಕೊಲೆ ಮಾಡುವ ಸುವರ್ಣಾವಕಾಶವನ್ನು ಕಳೆದುಕೊಂಡಿದ್ದಾರೆ’ ಎಂದು ಪೋಸ್ಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.