ಮಂಗಳೂರು: ಮಾಸ್ಟರ್ ಶೆಫ್ ಚಾಂಪಿಯನ್ ಮೊಹಮ್ಮದ್ ಆಶಿಕ್ಗೆ ಅದ್ದೂರಿ ಸ್ವಾಗತ
ಮಂಗಳೂರು: ದೇಶದ ಪ್ರತಿಷ್ಠಿತ ಅಡುಗೆ ಸ್ಪರ್ಧೆ, ಸೋನಿ ಲಿವ್ ನಲ್ಲಿ ಪ್ರಸಾರವಾದ ಮಾಸ್ಟರ್ ಶೆಫ್ನ ಎಂಟನೇ ಆವೃತ್ತಿಯ ವಿಜೇತರಾಗಿರುವ ಮಂಗಳೂರಿನ ಮೊಹಮ್ಮದ್ ಆಶಿಕ್ ಅವರನ್ನು ರವಿವಾರ ಸಂಜೆ ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದಿಸಲಾಯಿತು.
ಆಶಿಕ್ ಫ್ಯಾನ್ಸ್ ಕುಡ್ಲ ಗೆಳೆಯರ ಬಳಗದ ವತಿಯಿಂದ ನಗರದ ನೆಕ್ಸಸ್ ಫಿಝಾ ಮಾಲ್ನಲ್ಲಿ ನಡೆದ ಸಮಾರಂಭದಲ್ಲಿ ಮೊಹಮ್ಮದ್ ಆಶಿಕ್ ಅವರನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಸನ್ಮಾನಿಸಿದರು. ಮೊಹಮ್ಮದ್ ಆಶಿಕ್ ಸಾಧನೆ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು.
ಊರಿನ ಎಲ್ಲರ ಪ್ರೀತಿ, ವಿಶ್ವಾಸ, ಹಾರೈಕೆಯ ಫಲವಾಗಿ ತನಗೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಸನ್ಮಾನಿತ ಆಶಿಕ್ ನುಡಿದರು.
ಫಿಝಾ ಮಾಲ್ನ ನಿರ್ದೇಶಕರಾದ ಅರವಿಂದ ಶ್ರೀವಾಸ್ತವ್, ಆಶಿಕ್ ತಂದೆ ಅಬ್ದುಲ್ ಖಾದರ್ ಹಾಗೂ ತಾಯಿ ಸಾರಮ್ಮ ಅವರು ಉಪಸ್ಥಿತರಿದ್ದರು.
ಆಶಿಕ್ ಫ್ಯಾನ್ಸ್ ಕುಡ್ಲ ಗೆಳೆಯರ ಬಳಗದ ಸೈಫ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.
ಅಂತರ್ ರಾಷ್ಟ್ರೀಯ ಖ್ಯಾತಿಯ ಸೂಪರ್ ಸ್ಟಾರ್ ಶೆಫ್ ಗಳು ತೀರ್ಪುಗಾರರಾಗಿದ್ದ ಸೋನಿ ಲಿವ್ ನಲ್ಲಿ ಪ್ರಸಾರವಾದ ಮಾಸ್ಟರ ಶೆಫ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ಮೊಹಮ್ಮದ್ ಆಶಿಕ್ ಅವರು ಇಂದು ಮಧ್ಯಾಹ್ನ ಆಗಮಿಸಿದಾಗ ಅವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಚೆಂಡೆ ವಾದ್ಯಗಳ ಸಹಿತ ಭರ್ಜರಿ ಸ್ವಾಗತ ನೀಡಲಾಯಿತು. ಬಳಿಕ ಮೆರವಣಿಗೆಯಲ್ಲಿ ಫಿಝಾ ಮಾಲ್ಗೆ ಆಗಮಿಸಿದ ಆಶಿಕ್ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆಗಮಿಸಿದ್ದರೂ ಅವರಿಗಾಗಿ ಅಭಿಮಾನಿಗಳು ಕಾದಿದ್ದರು.