ಶತಮಾನೋತ್ಸವ ಸಂಭ್ರಮದಲ್ಲಿ ಉಡುಪಿಯ ನಾರ್ತ್ ಶಾಲೆ
ಉಡುಪಿ: ಉಡುಪಿಯ ಕೊಡುಗೈದಾನಿ ಹಾಜಿ ಅಬ್ದುಲ್ಲಾರು ಸ್ಥಾಪಕ ಸದಸ್ಯರಾಗಿದ್ದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ನಾರ್ತ್) ಶತಮಾನೋತ್ಸವದ ಸಂಭ್ರಮವನ್ನು ಆಚರಿಸಲಿದೆ.
ನಗರದ ಹೃದಯಭಾಗದಲ್ಲಿ 1923ರಲ್ಲಿ ಪ್ರಾರಂಭ ಗೊಂಡ ನಾರ್ತ್ ಶಾಲೆ ಎಂದೇ ಜನರಿಂದ ಕರೆಯಲ್ಪಡುವ ಈ ಶಾಲೆ 2023ರಲ್ಲಿ ಶತಮಾನೋತ್ಸವ ಆಚರಣೆಯಲ್ಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರುಮಾಡಿರುವ ಈ ಶಾಲೆ ಮಾದರಿ ಶಾಲೆಯೆಂದೇ ಹೆಸರು ಗಳಿಸಿದೆ.
ಈ ಶಾಲೆಯಲ್ಲಿ ಅನೇಕ ಹಿರಿಯ ಮಠಾಧೀಶರುಗಳು, ಉಡುಪಿಯ ಅನೇಕ ಗಣ್ಯರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಬದುಕಿನ ಪ್ರಾಥಮಿಕ ಹಂತದ ಶಿಕ್ಷಣವನ್ನು ಇಲ್ಲೇ ಪಡೆದಿದ್ದಾರೆ. ಶತಮಾನೋತ್ಸವದ ಸಂಭ್ರಮದಲ್ಲಿ ಕಳೆದೊಂದು ವರ್ಷದಿಂದ ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಹಿತೈಷಿಗಳು ಹಾಗೂ ದಾನಿಗಳ ನೆರವಿನಿಂದ ಶಾಲೆಯಲ್ಲಿ ಹಂತ ಹಂತವಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ನಾರ್ತ್ ಶಾಲೆ ಹಳೆ ವಿದ್ಯಾರ್ಥಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಜೊತೆ ಕಾರ್ಯದರ್ಶಿ ಶುಭ ರಾವ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸ ಲಾಗಿದ್ದು, ಇನ್ನೂ ಅನೇಕ ಪ್ರಗತಿಯ ಹಂತದಲ್ಲಿವೆ. ವಲಸೆ ಕಾರ್ಮಿಕರ ಮಕ್ಕಳೇ ಹೆಚ್ಚು ಕಲಿಯುತ್ತಿರುವ ಈ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡಲು ಕಂಪ್ಯೂಟರ್ ಲ್ಯಾಬ್ ಒಂದನ್ನು ನಿರ್ಮಿಸಲಾಗುತ್ತಿದೆ ಎಂದರು.
ಸದ್ಯ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 80 ಮಂದಿ ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಶಾಲೆಯಲ್ಲಿ ನಾಲ್ವರು ಖಾಯಂ ಶಿಕ್ಷಕರಿದ್ದಾರೆ. ಆದರೆ ಇದು ಸಾಲುತಿಲ್ಲ. ಹೀಗಾಗಿ ಶಾಲಾಭಿವೃದ್ಧಿ ಸಮಿತಿಯೇ ಇಬ್ಬರು ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ ಎಂದು ಶುಭ ರಾವ್ ತಿಳಿಸಿದರು.
ಮುಂದಿನ ವರ್ಷದಿಂದ ಇಂಗ್ಲೀಷ್ ಮಾಧ್ಯಮವನ್ನು ಪ್ರಾರಂಭಿಸುವ ಯೋಚನೆ ಇದೆ. ಅಲ್ಲಿ ಅಂಗನವಾಡಿಯೂ ಇದ್ದು, ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯ- ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಸಮವಸ್ತ್ರ, ಪುಸ್ತಕ-ಗಳನ್ನೂ ಮಕ್ಕಳಿಗೆ ನೀಡಲಾಗುತ್ತಿದೆ ಎಂದರು.
ಡಿ.24ಕ್ಕೆ ಶತಮಾನೋತ್ಸವ: ಶಾಲೆಯ ಶತಮಾನೋತ್ಸವವನ್ನು ಡಿ.24 ರಂದು ಆಚರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಯಶಪಾಲ್ ಸುವರ್ಣ ಹಾಗೂ ಇತರ ಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 8:30ರಿಂದ ಅಪರಾಹ್ನ 1:30ರವರೆಗೆ ಶಾಲಾ ವಾರ್ಷಿಕೋತ್ಸವ ಹಾಗೂ ಶತಮಾನೋತ್ಸವ ಆಚರಣೆ ನಡೆಯಲಿದೆ ಎಂದರು.
ಅಪರಾಹ್ನ 3:30ರಿಂದ ಶಾಲಾ ಹಳೆ ವಿದ್ಯಾರ್ಥಿಗಳಿಂದ ಶತಮಾನೋತ್ಸವದ ಅಂಗವಾಗಿ ಗುರುವಂದನೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿ ರುತ್ತವೆ. ಡಿ.17ರಂದು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವನ್ನೂ ಆಯೋಜಿಸಲಾಗಿದೆ ಎಂದು ಶುಭ ರಾವ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಸತೀಶ್ ರಾವ್ ಮಂಚಿ, ಉಪಾಧ್ಯಕ್ಷ ರಂಜನ್ ಭಾಗವತ್, ನಗರಸಭಾ ಸದಸ್ಯೆ ಮಾನಸ ಸಿ.ಪೈ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ವಸಂತಿ ಬಿ. ಉಪಸ್ಥಿತರಿದ್ದರು.”