ವಿಕಸಿತ ಭಾರತದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ- ಶೋಭಾ ಕರಂದ್ಲಾಜೆ
ಉಡುಪಿ, ಡಿ.9: ಸರ್ಕಾರದ ಯೋಜನೆಗಳನ್ನು ತಲುಪದೇ ಇದ್ದವರಿಗೆ ತಲುಪಿಸುವುದು, ಅವಶ್ಯಕತೆ ಇದ್ದವರಿಗೆ ಸರ್ಕಾರದ ಸೇವೆಗಳನ್ನು ಅವರ ಮನೆ ಬಾಗಿಲಲ್ಲಿ ಒದಗಿಸುವುದು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಾಹಿತಿ ಕೊರತೆಯಿಂದ ಆಗುವ ತೊಡಕುಗಳನ್ನು ನಿವಾರಿಸುವುದು ವಿಕಸಿದ್ಧ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಉದ್ದಿಮೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಇಂದು ಉಡುಪಿಯ ತೋನ್ಸೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನ ಆಗಮಿಸಿದಾಗ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ 2047ರ ಹೊತ್ತಿಗೆ ಭಾರತವನ್ನು ಜಗತ್ತಿನ ದೊಡ್ಡಣ್ಣನಾಗಿ ಮಾಡುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಇದು ಪಕ್ಷಾತೀತ ಕಾರ್ಯಕ್ರಮ ಎಲ್ಲರ ಸಹಕಾರದೊಂದಿಗೆ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ, ಎಲ್ಲರೂ ಅವರವರ ಜವಾಬ್ದಾರಿ ನಿರ್ವಹಿಸಿದರೆ ದೇಶದ ಅಭಿವೃದ್ಧಿಯಾಗುತ್ತದೆ. 2047 ರಲ್ಲಿ ಭಾರತ ವಿಕಸಿತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಬಡವರಿಗೆ ದುರ್ಬಲರಿಗೆ ಯೋಚನೆಗಳು ತಲುಪುವಂತೆ ಮಾಡುವುದುಎಲ್ಲರ ಜವಾಬ್ದಾರಿ.ಸ್ವನಿಧಿ ಯೋಜನೆ, ವಿಶ್ವಕರ್ಮ ಯೋಜನೆ ಮುಂತಾದ ಜನಪರ ಕಾರ್ಯಕ್ರಮಗಳು ಮನೆಮನೆಗೆ ತಲುಪ ಬೇಕು. ಇತಿಹಾಸದಲ್ಲಿ ಪ್ರಥಮ ಬಾರಿಗೆ ಅರ್ಜಿ ಕೊಡದೆ ಸರ್ಕಾರದ ಅನುದಾನ ಒದಗಿಸುತ್ತಿರುವ ಕಿಸಾನ್ ಸಮ್ಮಾನ್ ಯೋಜನೆ ನಮ್ಮೆಲ್ಲ ರೈತರಿಗೆ ತಲುಪುತ್ತಿದೆ, ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸಲಾಗುತ್ತಿದೆ. ನಡೆಯುವ ದಾರಿ, ಕುಡಿಯುವ ನೀರು,ಸಾವು ಬದುಕಿನಲ್ಲಿರುವ ರೋಗಿಗೆ ಸಹಾಯ ಮಾಡುವಲ್ಲಿ ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳನ್ನು ಪಕ್ಷಾತೀತವಾಗಿ ತಲುಪಿಸುವುದು ನಮ್ಮ ಆದ್ಯತೆಯಾಗಬೇಕು. ವಿಕಸಿತ ಭಾರತ ಸಂಕಲ್ಪ ಯಾತ್ರೆ ಈವರೆಗೆ ಯೋಜನೆಗಳು ತಲುಪದೇ ಇದ್ದವರನ್ನು ತಲುಪುತ್ತಿದೆ ಎಂದು ಹೇಳಿದರು. ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ತೊನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ, ಕುಸುಮ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್, ಕೆನರಾ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಶೀಲಾ ಸಾಜನ್, ದೂರದರ್ಶನದ ಉಪನಿರ್ದೇಶಕ(ಸುದ್ದಿ) ರಾದ ಯಶವಂತ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ ಧನಂಜಯ್, ಬ್ಯಾಂಕಿನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಫಲಾನುಭವಿಗಳೊಂದಿಗೆ ನಡೆಸಿದ ಸಂವಾದದ ನೇರ ಪ್ರಸಾರವನ್ನು ಅತಿಥಿಗಳು ಮತ್ತು ಸಾರ್ವಜನಿಕರು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ವಿಕಸಿತ ಭಾರತ ಸಂಕಲ್ಪ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಸ್ಥಳದಲ್ಲಿಯೇ ನೀಡಲಾಯಿತು ಫಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ನವರು ಕೀಟನಾಶಕ ಹಾಗೂ ಸೂಕ್ಷ್ಮ ಪೋಷಕಾಂಶಗಳ ಸಿಂಪರಣೆಗೆ ಡ್ರೋನ್ ಬಳಕೆಯ ಕುರಿತ ಪ್ರಾತ್ಯಕ್ಷಿಕೆ ನಡೆಯಿತು.