3 ರಾಜ್ಯಗಳಲ್ಲಿ ಐಟಿ ದಾಳಿ: ದಾಖಲೆ ರೂ. 290 ಕೋಟಿ ನಗದು ವಶ – ಮುಂದುವರಿದ ಶೋಧ
ಹೊಸದಿಲ್ಲಿ: ಒಡಿಶಾ ಮೂಲದ ಡಿಸ್ಟಿಲ್ಲರಿಗೆ ಸಂಬಂಧಿಸಿದಂತೆ ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಲವಾರು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಗಳಲ್ಲಿ ಕನಿಷ್ಠ ರೂ. 290 ಕೋಟಿ ನಗದು ವಶಪಡಿಸಿಕೊಳ್ಳಲಾಗಿದ್ದು ದಾಳಿ ಮುಂದುವರಿದಿರುವುದರಿಂದ ಇನ್ನಷ್ಟು ನಗದು ವಶಪಡಿಸಿಕೊಳ್ಳುವ ನಿರೀಕ್ಷೆಯಿದೆ. ಇದು ಈವರೆಗಿನ ಆದಾಯ ತೆರಿಗೆ ದಾಳಿಗಳಲ್ಲಿ ವಶಪಡಿಸಿಕೊಳ್ಳಲಾದ ಗರಿಷ್ಠ ಪ್ರಮಾಣದ ನಗದು ಎಂದು ಹೇಳಲಾಗುತ್ತಿದೆ.
ಮೂರು ರಾಜ್ಯಗಳ ಮೂರು ಸ್ಥಳಗಳಲ್ಲಿನ ಒಂಬತ್ತು ಲಾಕರ್ಗಳು ಮತ್ತು ಏಳು ಕೊಠಡಿಗಳ ಪರಿಶೀಲನೆ ಇನ್ನಷ್ಟೇ ನಡೆಯಬೇಕಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ. ಕಪಾಟುಗಳು ಮತ್ತು ಇತರ ಪೀಠೋಪಕರಣಗಳಲ್ಲಿ ನಗದು ಅಡಗಿಸಿಡಲಾಗಿತ್ತು.
ಒಡಿಶಾ ಮೂಲದ ಬೌಧ್ ಡಿಸ್ಟಿಲ್ಲರಿ, ಈ ಕಂಪನಿಗೆ ಸೇರಿದ ಬಲದೇವ್ ಸಾಹು ಇನ್ಫ್ರಾ ಕಚೇರಿಗಳು ಹಾಗೂ ಸಂಸ್ಥೆಗೆ ಸೇರಿದ ಅಕ್ಕಿ ಮಿಲ್ನಲ್ಲಿ ಶೋಧ ನಡೆದಿದೆ.
ಜಾರ್ಖಂಡ್ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಕುಮಾರ್ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲಿ ಕೋಟ್ಯಂತರ ನಗದು ಪತ್ತೆಯಾಗಿದೆ.
ಜನರಿಂದ ಲೂಟಿಗೈದ ಹಣವನ್ನು ವಾಪಸ್ ನೀಡಲಾಗುವುದು ಎಂದು ಪ್ರಧಾನಿ ಮೋದಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
“ದೇಶದ ಜನರು ಈ ನೋಟುಗಳ ಕಂತೆಯನ್ನು ನೋಡಿ ನಂತರ ಅವರ ನಾಯಕರ ಪ್ರಾಮಾಣಿಕ “ಭಾಷಣಗಳನ್ನು” ಆಲಿಸಬೇಕು. ಜನರಿಂದ ಲೂಟಿಗೈಯ್ಯಲಾದ ಎಲ್ಲಾ ಹಣ ವಾಪಸ್ ನೀಡಲಾಗುವುದು, ಇದು ಮೋದಿಯ ಗ್ಯಾರಂಟಿ” ಎಂದು ಹೇಳಿದ್ದರು.
ಒಡಿಶಾ ಬಿಜೆಪಿ ಘಟಕವು ಘಟನೆಯ ಸಿಬಿಐ ತನಿಖೆಗೆ ಆಗ್ರಹಿಸಿದೆ. ಒಡಿಶಾದ ಸಚಿವೆಯೊಬ್ಬರು ಐಟಿ ದಾಳಿಗೊಳಗಾಗಿರುವ ಮದ್ಯ ಮಾರಾಟಗಾರರೊಬ್ಬರ ಜೊತೆ ವೇದಿಕೆ ಹಂಚಿಕೊಂಡಿರುವ ಚಿತ್ರಗಳನ್ನೂ ಬಿಜೆಪಿ ವಕ್ತಾರ ಮನೋಜ್ ಮಹಾಪಾತ್ರ ತೋರಿಸಿದ್ದಾರೆ. “ಸ್ಥಳೀಯ ನಾಯಕರು ಮತ್ತು ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಈ ರೀತಿ ತೆರಿಗೆ ವಂಚನೆ ನಡೆಯದು. ರಾಜ್ಯದ ಅಬಕಾರಿ ಇಲಾಖೆ, ವಿಜಿಲೆನ್ಸ್ ಇಲಾಖೆ, ಆರ್ಥಿಕ ಅಪರಾಧಗಳ ಇಲಾಖೆ ಏನು ಮಾಡುತ್ತಿದೆ?” ಎಂದು ಅವರು ಪ್ರಶ್ನಿಸಿದರು.