ಉಡುಪಿ: ಕಳ್ಳತನ ಆರೋಪಿಯ ಬಂಧನ- 3.13 ಲಕ್ಷ ರೂ.ವಶ
ಉಡುಪಿ, ಡಿ.9: ತಾನು ಹೋಮ್ ನರ್ಸ್ ಆಗಿ ಕೆಲಸ ಮಾಡುತಿದ್ದ ಮನೆಯಿಂದ ಹಾಗೂ ವಾಹನದಲ್ಲಿ ಇಟ್ಟಿದ್ದ ಒಟ್ಟು 3.45 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದ ಆರೋಪಿ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ (34) ಎಂಬಾತನನ್ನು ಪೊಲೀಸರು ನಿನ್ನೆ ಬಾಗಲಕೋಟೆಯಲ್ಲಿ ಬಂಧಿಸಿದ್ದು, ಆತನಿಂದ 3.13 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಈ ಕಳ್ಳತನದ ಬಗ್ಗೆ ಪುತ್ತೂರು ಗ್ರಾಮದ ಸಂತೋಷ್ ಎಂಬವರು ಉಡುಪಿ ನಗರ ಠಾಣೆಯಲ್ಲಿ ಡಿ.5ರಂದು ದೂರು ದಾಖಲಿಸಿದ್ದರು. ಮಾತಾ ಸೆಲ್ಯೂಷನ್ ಹೋಮ್ ನರ್ಸ್ ಇವರಿಂದ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ ಎಂಬಾತನನ್ನು ಹೋಂ ನರ್ಸ್ ಆಗಿ ಕೆಲಸಕ್ಕೆ ಇಟ್ಟುಕೊಂಡಿದ್ದು, ಪ್ರವೀಣನು ಡಿ.4ರ ಸಂಜೆ 6:30ರಿಂದ ರಾತ್ರಿ 9:00 ಗಂಟೆಯ ನಡುವೆ ನಾಪತ್ತೆಯಾಗಿದ್ದು, ಕೆಲಸ ಮಾಡುವ ಮನೆಯಿಂದಲೂ ನಾಪತ್ತೆಯಾಗಿದ್ದ. ಹೋಗುವಾಗ ಮನೆಯಲ್ಲಿ ಹಾಗೂ ಬೊಲೆರೋ ವಾಹನದ ಡ್ಯಾಶ್ ಬೋರ್ಡನಲ್ಲಿಟ್ಟಿದ್ದ 3,45,000 ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ನೇಮಿಸಲಾಗಿತ್ತು. ಈ ತಂಡ ಡಿ.7ರಂದು ಬಾಗಲಕೋಟೆ ತಾಲೂಕು ಹುನಗುಂದದಲ್ಲಿ ಆರೋಪಿ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳನನ್ನು ವಶಕ್ಕೆ ಪಡೆದು 3,13,500 ರೂ. ಹಣವನ್ನು ಸ್ವಾಧೀನ ಪಡಿಸಿಕೊಂಡಿದೆ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.