ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
ಉಡುಪಿ, ಡಿ.8: ವ್ಯಕ್ತಿ ಸಮಾಜದಿಂದ ಪಡೆದು ಬೆಳೆಯುತ್ತಾನೆ. ಗಳಿಸಿದ ಸಂಪತ್ತನ್ನು ಸಮಾಜಕ್ಕೆ ಸಮರ್ಪಿಸಿದವರ ಬದುಕು ಸಾರ್ಥಕವಾಗುತ್ತದೆ. ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾದುದು ಎಂದು ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯ ಯಕ್ಷಗಾನ ಕಲಾರಂಗ ನಾಡಿನ ಖ್ಯಾತ ಉದ್ಯಮಿ, ದಾನಿ ಡಾ. ಎಚ್.ಎಸ್. ಶೆಟ್ಟಿ ಅವರಿಗೆ ಬೆಳಗಾವಿಯ ತಾಂತ್ರಿಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡುತಿದ್ದರು.
ಡಾ. ಎಚ್. ಎಸ್.ಶೆಟ್ಟಿ ಅವರು ಸಮಾಜಕ್ಕೆ ಅದರಲ್ಲೂ ವಿಶೇಷವಾಗಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ, ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆರ್ಥಿಕ ನೆರವಿಗಾಗಿ ಅಭಿನಂದನಾರ್ಹರು ಎಂದು ಶ್ರೀಪಾದರು ಡಾ. ಎಚ್. ಎಸ್. ಶೆಟ್ಟರನ್ನು ಶಾಲು ಹಾಗೂ ಬೆಳ್ಳಿಯ ಫಲಕ ನೀಡಿ ಸನ್ಮಾನಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಡಾ. ತಲ್ಲೂರು ಶಿವರಾಮ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಪಿ. ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೆನರಾ ಬಸ್ಸು ಮಾಲಕರ ಸಂಘದ ವತಿಯಿಂದ ಯಕ್ಷಗಾನ ವೃತ್ತಿ ಕಲಾವಿದರಿಗೆ ನೀಡುವ ಶೇ.50 ರಿಯಾಯಿತಿ ದರದ ಬಸ್ಪಾಸ್ನ್ನು ಮಂದಾರ್ತಿ ಮೇಳದ ಕಲಾವಿದ ಕೇಶವ ಆಚಾರ್ಯ ಹಾಗೂ ಜಯದೇವ ಮರಾಠಿ ಅವರಿಗೆ ಸಾಂಕೇತಿಕವಾಗಿ ನೀಡಲಾಯಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.