ವಿಜಯೇಂದ್ರ, ಆರ್ ಅಶೋಕ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ: ಖರ್ಗೆ
ಬೆಳಗಾವಿ: ಕಲಬುರಗಿ ಬಿಜೆಪಿ ಮುಖಂಡ ಮಣಿಕಾಂತ್ ರಾಥೋಡ್ ಮೇಲೆ ತಾನು ಹಲ್ಲೆ ನಡೆಸಿದ್ದೇನೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಮಾನನಷ್ಠ ಮೊಕದ್ದಮೆ ದಾಖಲಿಸುವುದಾಗಿ ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಹೇಳಿದ್ದಾರೆ.
ಬಿಜೆಪಿ ನಾಯಕರ ನಿರಂತರ ಮೌಖಿಕ ದಾಳಿಯಿಂದ ತನಗೆ ನೋವಾಗಿದೆ ಮತ್ತು ತನ್ನ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ ಎಂದು ಹೇಳಿದ ಪ್ರಿಯಾಂಕ್, ದೂರುದಾರರ (ಮಣಿಕಂಠ ರಾಠೋಡ್) ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರದಿಂದ ಮಣಿಕಂಠ ರಾಠೋಡ್ ಅವರನ್ನು ಸೋಲಿಸಿದ್ದರು.
‘ಚಿತ್ತಾಪುರ ಬಿಜೆಪಿ ಅಭ್ಯರ್ಥಿಯ ಈ ಒಂದು ದೂರು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಂದ ಹಿಡಿದು ಆರ್ ಅಶೋಕವವರೆಗೆ ಬಹುತೇಕ ಎಲ್ಲಾ ಬಿಜೆಪಿ ನಾಯಕರಿಂದ ನಾನು ಟೀಕೆಗಳನ್ನು ಸ್ವೀಕರಿಸಿದ್ದೇನೆ. ಈಗ ತನಿಖೆಯಿಂದ ವಿಭಿನ್ನ ಸತ್ಯ ಹೊರಬಿದ್ದಿದೆ. ನಾನು ಯಾರನ್ನೂ ಬಿಡುವುದಿಲ್ಲ. ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ನನಗೆ ವಿಶ್ವಾಸಾರ್ಹತೆ ಇಲ್ಲವೇ? ಇದನ್ನೆಲ್ಲ ಕೇಳಲು ನಾನಿಲ್ಲಿ ಇಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ನವೆಂಬರ್ 19ರಂದು ನೀಡಿರುವ ದೂರಿನಲ್ಲಿ, ಮಾಲಗತ್ತಿ ಗ್ರಾಮದ ತಮ್ಮ ಜಮೀನಿನಿಂದ ಕಲಬುರಗಿಗೆ ತೆರಳುತ್ತಿದ್ದಾಗ ಚಿತ್ತಾಪುರ ಮತಕ್ಷೇತ್ರದ ಶಂಕರವಾಡಿ ಕ್ರಾಸ್ ಬಳಿ ಅಧಿಕಾರಿಗಳು ಹಾಗೂ ರಾಜಕೀಯ ವಿರೋಧಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
‘ರಾಜ್ಯ ಸರ್ಕಾರದ ವಿರುದ್ಧ ಏನನ್ನೂ ಕಂಡುಹಿಡಿಯದ ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ಹೀಗಾಗಿ, ಇಂತಹ ನಾಟಕಗಳಲ್ಲಿ ತೊಡಗಿದ್ದಾರೆ. ಅವರು ಅದು ನಿಜವೋ ಸುಳ್ಳೋ ಎಂದು ಸಹ ಪರಿಶೀಲಿಸಲಿಲ್ಲ ಮತ್ತು ಅವರ (ರಾಠೋಡ್) ರಕ್ಷಣೆಗೆ ಮುಂದಾದರು. ಈ ವ್ಯಕ್ತಿಯ ವಿರುದ್ಧ ಕಳ್ಳತನ, ವಂಚನೆ ಸೇರಿ ಇತರ 22 ಅಪರಾಧ ಪ್ರಕರಣಗಳು ದಾಖಲಾಗಿವೆ ಮತ್ತು ಒಂದು ವರ್ಷ ಶಿಕ್ಷೆಯನ್ನು ಸಹ ಅನುಭವಿಸಿದ್ದಾರೆ. ತನಿಖೆ ಪೂರ್ಣಗೊಳ್ಳಲು ನಾನು ಕಾಯುತ್ತಿದ್ದೆ, ಈ ದೂರು ಸುಳ್ಳು ಎಂದು ಸಾಬೀತಾಗಿದೆ ಮತ್ತು ಆ ಸಮಯದಲ್ಲಿ ದೂರುದಾರರು ಮಾಲಗತ್ತಿಯಲ್ಲಿ ಇರಲಿಲ್ಲ’ ಎಂದು ಪ್ರಿಯಾಂಕ್ ಹೇಳಿದರು.
ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಕ್ರಮ ಕೈಗೊಳ್ಳುವುದಾಗಿ ಪ್ರಿಯಾಂಕ್ ಹೇಳಿದ್ದಾರೆ.