ದಲಿತರು ದೇವರ ಪೋಟೋ ತೆಗೆದು ಬುದ್ಧನನ್ನು ಆರಾಧಿಸಿ: ಜಯನ್ ಮಲ್ಪೆ
ಮಲ್ಪೆ: ದಲಿತರು ಹಿಂದೆಯೂ ಹಿಂದೂಗಳಾಗಿರಲಿಲ್ಲ, ಮುಂದೆಯೂ ಹಿಂದೂಗಳಾಗಿರುವುದಿಲ್ಲ. ದಲಿತರು ತಮ್ಮ ಮನೆಗಳಲ್ಲಿರುವ ದೇವರ ಪೋಟೋ ತೆಗೆದು ಬುದ್ಧ ಚಿಂತನೆ ಮಾಡಿದರೆ ಮಾತ್ರ ಸಮಾಜ ಪರಿವರ್ತನೆಯಾಗಿ ಅಭಿವೃದ್ಧಿಹೊಂದಲು ಸಾಧ್ಯ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆಯ ಮಲ್ಪೆ ನಗರ ಶಾಖೆ ಏರ್ಪಡಿಸಿದ,ಸಂವಿಧಾನದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ರವರ 67ನೇ ಮಹಾಪರಿನಿಬ್ಬಾಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಶತಶತಮಾನಗಳಿಂದ ದಲಿತರು ತಮ್ಮ ಮನೆಗಳಲ್ಲಿ ದೇವರ ಪೋಟೋಗೆ ಪೂಜೆ ಮಾಡಿದರೂ,ಅವರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ, ಕೊಲೆ, ಸುಲಿಗೆ, ಅತ್ಯಾಚಾರ, ಸಾವು, ನೋವುಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಎಲ್ಲ ದೇವಾಧಿದೇವತೆಗಳ ಸಂಹಾರಕರಾಗಿ ಮುನ್ನಡೆಯುತ್ತಾರೆ ಎಂದ ಜಯನ್ ಮಲ್ಪೆ, ವೈದಿಕರು ದಲಿತರ ರಾಜಕೀಯ ಅಧಿಕಾವನ್ನು ಕಬಳಿಸಿ,ಅವರನ್ನು ಶಾಶ್ವತ ಗುಲಾಮರನ್ನಾಗಿಸಲೆಂದೇ ದೇವರನ್ನು ಸೃಷ್ಟಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಲ್ಯಾನ್ ವಹಿಸಿದ್ದರು. ಹೋರಾಟಗಾರ ಸುರೇಶ್ ಪಾಲನ್ ಮಾತನಾಡಿ,ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು,ಮರೆಯಾಗುತ್ತಿರುವ ಜೀವನಕ್ರಮಗಳು, ತಲ್ಲಣಗೊಳ್ಳುತ್ತಿರುವ ಸಿದ್ಧಾಂತಗಳ ರೋಗಕ್ಕೆ ಅಂಬೇಡ್ಕರ್ ವಿಚಾರಧಾರೆ ಮದ್ದು ಇದ್ದಂತ್ತೆ. ಜನರ ಬದುಕುಗಳನ್ನು ಅಸನುಮಾಡಲು ಪ್ರಯತ್ನಿಸಿದ ಭಾರತದ ಏಕೈಕ ಭಾಗ್ಯವಿಧಾತ ಅಂಬೇಡ್ಕರ್ ಎಂದರು.
ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿ, ದಲಿತ ಚಳುವಳಿಯ ನಾಯಕತ್ವ ಪಾಳೇಗಾರಿಕೆಯ ಸಂಸ್ಕೃತಿಯಿಂದ ಕೂಡಿದೆ. ಒಂದು ಸಮಸ್ಯೆಯ ಕುರಿತು ಹೋರಾಡಲು ದಲತ ಜನಾಂಗ ಒಂದಾಗಿ ಸಾಮೂಹಿಕ ನಾಯಕತ್ವ ಹುಟ್ಟಹಾಕಬೇಕಿದೆ.ದಲಿತ ನಾಯಕರು ವಯಕ್ತಿಕ ದ್ವೇಷ,ಅಸೂಯೆ ಬಿಡದೆ ಸಂಘಟನೆಗಳ ವಿಘಟನೆಗೆ ಕೊನೆಯಿಲ್ಲ ಎಂದರು.
ಯುವನಾಯಕರಾದ ಸಂತೋಷ್ ಕಪ್ಪೆಟ್ಟು, ಕೃಷ್ಣ ಶ್ರೀಯಾನ್, ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ದೀಪಕ್ ಕೊಡವೂರು, ಶಂಕರ್ ನೆರ್ಗಿ, ವಿನಯ ಬಲರಾಮನಗರ, ಭಗವಾನ್ ಮಲ್ಪೆ, ಶಶಿಕಲಾ ತೊಟ್ಟಂ, ಪ್ರಮೀಳ ಹರೀಶ್, ಕಲಾವತಿ, ಸಂಕಿ ತೊಟ್ಟಂ, ವಿನೋದ ಜಯರಾಜ್, ಸಂಧ್ಯಾ ನೆರ್ಗಿ,ಶಶಿ ತೊಟ್ಟಂ ಮಾ.ಗ್ಯಾಬ್ರಿಯಲ್, ಮಾ.ಹರ್ಷಿಲ್ ಉಪಸ್ಥಿತರಿದ್ದರು.
ಬಿ.ಎನ್.ಪ್ರಶಾಂತ್ ಸ್ವಾಗತಿಸಿ, ಸುಶೀಲ್ ಕುಮಾರ್ ಕೊಡವೂರು ವಂದಿಸಿದರು