ವಂದೇ ಭಾರತ್ ಮಿಷನ್ ಅಡಿ 20 ಲಕ್ಷ ಭಾರತೀಯರು ಸ್ವದೇಶಕ್ಕೆ: ಹರ್ ದೀಪ್ ಸಿಂಗ್ ಪುರಿ
ಬೆಂಗಳೂರು: ಕೊರೋನಾ ಸೋಂಕು ಸಂಕಷ್ಟ ಸಂದರ್ಭದಲ್ಲಿ ಜಾರಿಗೊಳಿಸಲಾದ ವಂದೇ ಭಾರತ್ ಮಿಷನ್ ಅಡಿ ಈವರೆಗೆ 20 ಲಕ್ಷ ಭಾರತೀಯರನ್ನು ವಿದೇಶಗಳಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಅವರು ಗುರುವಾರ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಂದೇ ಭಾರತ್ ಮಿಷನ್ ಅಡಿ ನಾಗರಿಕ ವಿಮಾನ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಇದಾಗಿದ್ದು, ಸಂಕಷ್ಟ ಸಂದರ್ಭದಲ್ಲಿ ಜನರನ್ನಷ್ಟೇ ಅಲ್ಲ, 120 ದೇಶಗಳಿಗೆ ಔಷಧಿಯನ್ನೂ ಸಹ ಪೂರೈಕೆ ಮಾಡಲಾಗಿದೆ. ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವಲ್ಲಿ ಏರ್ ಇಂಡಿಯಾ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದರು.
ಮೊದಲ ಹಂತದಲ್ಲಿ 64 ದೇಶಗಳಿಂದ 12, 708 ಜನರನ್ನು ಕರೆತರಲಾಯಿತು. ಕ್ರಮೇಣ ಈ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಯಿತು. ವಿದೇಶಗಳಲ್ಲಿರುವವರನ್ನು ಸ್ವದೇಶಕ್ಕೆ ಕರೆತರಲು ನಡೆಸಿದ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ ಎಂದು ಸಚಿವ ಪುರಿ ಮೆಚ್ಚುಗೆ ವ್ಯಕ್ತಪಡಿಸಿದಸಿದರು.
ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವಲ್ಲಿ ವಿದೇಶಾಂಗ ಸಚಿವಾಲಯದ ಕೊಡುಗೆ ಅಪಾರವಾಗಿದೆ. ಸಚಿವಾಲಯ ಈ ಸಂಬಂಧ ಜನರಿಂದ ಮನವಿಗಳನ್ನು ಸ್ವೀಕರಿಸಿ ಮಾಹಿತಿ ಕಲೆ ಹಾಕಿತ್ತು. ನಮ್ಮವರನ್ನು ಕರೆತರಲು 16 ದೇಶಗಳೊಂದಿಗೆ ತಾತ್ಕಾಲಿಕ ವಾಯುಯಾನ ಒಪ್ಪಂದ ಮಾಡಿಕೊಳ್ಳಲಾಯಿತು ಎಂದರು.