ಡಿ.8-12 ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವ ಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ
ಧರ್ಮಸ್ಥಳ: ದಕ್ಷಿಣ ಭಾರತದ ಪವಿತ್ರ ಯಾತ್ರಾಸ್ಥಳವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಿಸೆಂಬರ್ 8 ರಿಂದ 12 ರ ವರೆಗೆ ಲಕ್ಷ ದೀಪೋತ್ಸವ ಜತೆಗೆ ಸರ್ವ ಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಡಿ.8 ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಪ್ರೌಢಶಾಲಾ ಆವರಣದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ದಿನ ಸಂಜೆ 6 ರಿಂದ ಪ್ರದರ್ಶನ ಸ್ಥಳದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 7ರಿಂದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದವರು ಹಾಡು, ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಡಿ.11ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನವನ್ನು ವಾಗ್ಮಿ ಮತ್ತು ವಿದ್ವಾಂಸ ಗುರುರಾಜ ಕರ್ಜಗಿ ಉದ್ಘಾಟಿಸಲಿದ್ದಾರೆ. ಡಿ. 11 ರಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಸುಪ್ರೀಂ ಕೋರ್ಟ್ ವಕೀಲ ಎಂ.ಆರ್.ವೆಂಕಟೇಶ್ ಮತ್ತು ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ಮಹಮ್ಮದ್ ಗೌಸ್ ಹವಾಲ್ದಾರ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಬೆಂಗಳೂರಿನ ಅನುರಾಧಾ ವಿಕ್ರಾಂತ್ ಮತ್ತು ತಂಡ ರಾತ್ರಿ 8.30 ರಿಂದ ಬ್ಯಾಲೆ ನೃತ್ಯ ನೀಡಲಿದೆ. ಸಂಜೆ 5 ಗಂಟೆಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಉದ್ಘಾಟಿಸುವರು. ಡಿ. 12 ರಂದು ಖ್ಯಾತ ಗಮಕಿ ಎ.ವಿ. ಪ್ರಸನ್ನ ಬೆಂಗಳೂರು, ಹೊನ್ನಾವರದ ನಿವೃತ್ತ ಪ್ರಾಧ್ಯಾಪಕ ಶ್ರೀಪಾದ್ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಾಡಿ, ಬಂಟ್ವಾಳದ ಸಾಹಿತಿ ಅಜಕ್ಕಳ ಗಿರೀಶ್ ಭಟ್ ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರಿನ ಜತಿನ್ ನೃತ್ಯ ಅಕಾಡೆಮಿಯ ವಿದುಷಿ ಅರ್ಚನಾ ಪುಣ್ಯೇಶ್ ಮತ್ತು ತಂಡದವರು ರಾತ್ರಿ 8.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಡಿ. 12 ರ ಮಧ್ಯರಾತ್ರಿಯಿಂದ ಲಕ್ಷ ದೀಪೋತ್ಸವದ ಸಾಂಪ್ರದಾಯಿಕ ದೀಪಗಳ ಬೆಳಗುವಿಕೆ ಪ್ರಾರಂಭವಾಗಲಿದೆ.