ಮಿಜೋರಾಂ ವಿಧಾನಸಭಾ ಚುನಾವಣೆ ಫಲಿತಾಂಶ: 22 ಸ್ಥಾನಗಳಲ್ಲಿ ಝಡ್ಪಿಎಂ ಮುನ್ನಡೆ
ಐಜ್ವಾಲ್: ಪಂಚ ರಾಜ್ಯ ಚುನಾವಣೆಯ ಭಾಗವಾಗಿರುವ ಮಿಜೋರಂನ 40 ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ಜೆಡ್ಪಿಎಂ) ಮತ್ತು ಕಾಂಗ್ರೆಸ್ ನಡುವೆ ನಡುವೆ ಪೈಪೋಟಿ ಏರ್ಪಟ್ಟಿದೆ.
ಅಂಚೆ ಮತಪತ್ರಗಳ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಜೆಡ್ಪಿಎಂ 22 ಸ್ಥಾನಗಳಲ್ಲಿ, ಎಂಎನ್ಎಫ್ 10 ಮತ್ತು ಕಾಂಗ್ರೆಸ್ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಿಜೋರಾಂನಲ್ಲಿ ಮತ ಎಣಿಕೆಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಬಾರಿ ಮಿಜೋ ನ್ಯಾಷನಲ್ ಫ್ರಂಟ್, ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ.
ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿದ್ದು, ಶೇ.80.66ರಷ್ಟು ಜನರು ಮತ ಹಕ್ಕು ಚಲಾಯಿಸಿದ್ದರು. ತೆಲಂಗಾಣ, ಛತ್ತೀಸ್ಗಢ, ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಇಂದು ಮಿಜೋರಾಂ ಫಲಿತಾಂಶ ಪ್ರಕಟವಾಗಲಿದೆ. ಮಿಜೋರಾಂನ ಜನರಿಗೆ ಡಿಸೆಂಬರ್ 3ರ ಭಾನುವಾರ ವಿಶೇಷ ಪ್ರಾಮುಖ್ಯತೆಯ ದಿನವಾಗಿದ್ದರಿಂದ ಮತ ಎಣಿಕೆ ದಿನಾಂಕವನ್ನು ಒಂದು ದಿನ ಮುಂದೂಡಲಾಗಿತ್ತು.