ತೆಲಂಗಾಣ ಡಿಜಿ, ಐಜಿಪಿ ಅಮಾನತುಗೊಳಿಸಿ ಚುನಾವಣಾ ಆಯೋಗ ಆದೇಶ!
ಹೈದ್ರಾಬಾದ್: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ತೆಲಂಗಾಣದ ಡಿಜಿ ಮತ್ತು ಐಜಿಪಿ ಅಂಜನಿ ಕುಮಾರ್ ಅವರನ್ನು ಅಮಾನತುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಪೂರ್ಣ ಪ್ರಮಾಣದ ಚುನಾವಣಾ ಫಲಿತಾಂಶ ಬರುವ ಮುನ್ನವೇ ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಶುಭಾಶಯ ಕೋರಿದ್ದರು.
ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಜೈನ್ ಮತ್ತು ನೋಡಲ್ (ವೆಚ್ಚ) ಮಹೇಶ್ ಭಾಗವತ್ ಅವರೊಂದಿಗೆ ಅನುಮುಲಾ ರೇವಂತ್ ರೆಡ್ಡಿ ಅವರನ್ನು ಹೈದರಾಬಾದ್‌ನ ನಿವಾಸದಲ್ಲಿ ಭೇಟಿಯಾಗಿದ್ದ ಡಿಜಿ ಮತ್ತು ಐಜಿಪಿ ಹೂ ಗುಚ್ಚ ನೀಡುವ ಮೂಲಕ ಶುಭಾಶಯ ಕೋರಿದರು. ಇದು ಚುನಾವಣಾ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಆಯೋಗ, ತಕ್ಷಣವೇ ಜಾರಿಗೆ ಬರುವಂತೆ ಡಿಜಿ ಮತ್ತು ಐಜಿಪಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ತೆಲಂಗಾಣ ರಾಜ್ಯದ ಒಟ್ಟು 119 ಸ್ಥಾನಗಳ ಪೈಕಿ 65 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಬಿಆರ್‌ಎಸ್ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.