20 ಲಕ್ಷ ರೂ. ಲಂಚ ಪಡೆದ ಇಡಿ ಅಧಿಕಾರಿಯನ್ನೇ 18 ಕೀ. ಮೀ. ಚೆಸ್ ಮಾಡಿ ಬಂಧಿಸಿದ ಪೊಲೀಸರು!
ಚೆನ್ನೈ: ತಮಿಳುನಾಡು ರಾಜ್ಯ ಸರ್ಕಾರಿ ಉದ್ಯೋಗಿಯೊಬ್ಬರಿಂದ ನಗದು ರೂಪದಲ್ಲಿ 20 ಲಕ್ಷ ರೂ. ಸುಲಿಗೆ ಮಾಡಲು ಯತ್ನಿಸಿದ ಆರೊಪದಲ್ಲಿ ತಮಿಳುನಾಡು ಪೊಲೀಸರು ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರನ್ನು ಬಂಧಿಸಿದ್ದಾರೆ. ಈ ಕೆಂದ್ರ ಸರ್ಕಾರಿ ಅಧಿಕಾರಿಯ ಕಚೇರಿ ಮತ್ತು ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿರುವುದು ಇದೇ ಮೊದಲು.
ಬಂಧಿತ ಅಧಿಕಾರಿ ಅಂಕಿತ್ ತಿವಾರಿಯನ್ನು ಡಿಸೆಂಬರ್ 15ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇಂದ್ರ ಸರ್ಕಾರ ಅಥವಾ ಜಾರಿ ನಿರ್ದೇಶನಾಲಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಚಕ್ಷಣೆ ಮತ್ತು ಭ್ರಷ್ಟಾಚಾರ ತಡೆ ನಿರ್ದೇಶನಾಲಯದ ಪ್ರಕಾರ, ಈಗಾಗಲೇ ಇತ್ಯರ್ಥಪಡಿಸಿದ ಪ್ರಕರಣವೊಂ ದರಲ್ಲಿ ಕಾನೂನು ಕ್ರಮವನ್ನು ತಪ್ಪಿಸಲು 3 ಕೋಟಿ ರೂಪಾಯಿ ನೀಡುವಂತೆ ಆರೋಪಿ ಅಧಿಕಾರಿ ಆಗ್ರಹಿಸಿದ್ದ. ಅಕ್ಟೋಬರ್ 29ರಂದು ಈತ ಸರ್ಕಾರಿ ಉದ್ಯೋಗಿಯನ್ನು ಸಂಪರ್ಕಿಸಿ, ಪ್ರಧಾನಿ ನರೇಂದ್ರ ಮೋದಿ ಕಚೇರಿಯ ಸೂಚನೆ ಮೇರೆಗೆ ಕ್ರಮ ಆರಂಭಿಸಿರುವುದಾಗಿ ಹೇಳಿದ್ದ. ಬಳಿಕ ಏಜೆನ್ಸಿಯ ಮಧುರೈ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನಿಡಲಾಗಿತ್ತು. ಮೊದಲು 3 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಈತ ಬಳಿಕ ಮೇಲಧಿಕಾರಿಯವರ ಜತೆ ಮಾತನಾಡಿ 51 ಲಕ್ಷಕ್ಕೆ ಕಡಿತಗೊಳಿಸಿರುವುದಾಗಿ ತಿಳಿಸಿದ್ದ.
ನವೆಂಬರ್ 1ರಂದು 20 ಲಕ್ಷವನ್ನು ಮೊದಲ ಕಂತಾಗಿ ನೀಡಲಾಗಿತ್ತು. ಉಳಿದ 31 ಲಕ್ಷಕ್ಕಾಗಿ ಸರ್ಕಾರಿ ಉದ್ಯೋಗಿಗೆ ತಿವಾರಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 30ರಂದು ದೂರು ನೀಡಲಾಗಿತ್ತು. ಶುಕ್ರವಾರ ಬೆಳಿಗ್ಗೆ 10.30ಕ್ಕೆ ತಿವಾರಿಯನ್ನು ಬಂಧಿಸಲಾಗಿದೆ. ಅತ್ಯಧಿಕ ವೇಗದಲ್ಲಿ ಚಲಿಸುತ್ತಿದ್ದ ಕಾರನ್ನು ಹಿಂದಿಕ್ಕಿ ತಿವಾರಿಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಯಲಾಗಿದೆ ಎಂದು ಮೂಲಗಳು ಹೇಳಿವೆ.