ಭ್ರೂಣ ಹತ್ಯೆ ಪ್ರಕರಣ- ಮಡಿಕೇರಿಯಲ್ಲಿ ನಿಗೂಢವಾಗಿ ಕಾರಿನಲ್ಲಿ ವೈದ್ಯನ ಶವ ಪತ್ತೆ
ಮಡಿಕೇರಿ: ಮೈಸೂರಿನ ಕೊಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಸತೀಶ್ ಅವರು ಶುಕ್ರವಾರ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕುಶಾಲನಗರ ತಾಲ್ಲೂಕಿನ ಆನೆಕಾಡು ಗ್ರಾಮದ ಬಳಿ, ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದಕಾರಿನಲ್ಲಿ ವೈದ್ಯ ಸತೀಶ್ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಸತೀಶ್(47) ಅವರು ಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಶಿವಳ್ಳಿ ಗ್ರಾಮದ ನಿವಾಸಿಯಾಗಿದ್ದು, ಇತ್ತೀಚಿಗೆ ಬೆಳಕಿಗೆ ಬಂದ 900 ಭ್ರೂಣ ಹತ್ಯೆ ಪ್ರಕರಣದಲ್ಲಿ ಅವರ ಹೆಸರು ಸಹ ಕೇಳಿಬಂದಿತ್ತು.
ಇನ್ನು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಸತೀಶ್ ಅವರ ಹೆಸರು ಹೇಳಿದ್ದರು ಎನ್ನಲಾಗಿದೆ. ಅಲ್ಲದೆ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೈದ್ಯ ಸತೀಶ್ ಅವರು ತಲೆಮರೆಸಿಕೊಂಡಿದ್ದರು.ರಾಜ್ಯ ಸರ್ಕಾರ ಈಗ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಸಿಕ್ಕಿಬಿಳುವ ಭಯದಿಂದ ವೈದ್ಯ ಸತೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ವೈದ್ಯನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.