ಬೆಂಗಳೂರು: 48 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ, ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ವಾಪಸ್

ಬೆಂಗಳೂರು: ಬೆಂಗಳೂರಿನ ನಲವತ್ತೆಂಟು ಖಾಸಗಿ ಶಾಲೆಗಳಿಗೆ ಶುಕ್ರವಾರ ಬೆಳಗ್ಗೆ ಬಾಂಬ್ ಬೆದರಿಕೆ ಇರುವ ಇಮೇಲ್ ಬಂದಿದ್ದು, ಸಿಬ್ಬಂದಿ ಮತ್ತು ಪೋಷಕರಲ್ಲಿ ಭಯ ಹುಟ್ಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲಾ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 

ಪೊಲೀಸರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣವೇ ಶಾಲೆಯ ಆವರಣದಿಂದ ಹೊರಗೆ ಕಳುಹಿಸಿ, ತೀವ್ರ ತಪಾಸಣೆ ನಡೆಸಿದರು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಇನ್ನೂ ಪತ್ತೆಯಾಗಿಲ್ಲ ಮತ್ತು ಪ್ರಾಥಮಿಕ ತನಿಖೆಯಿಂದ ಇದು ಹುಸಿ ಬಾಂಬ್ ಸಂದೇಶ ಎಂದು ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

“ಇದುವರೆಗೆ ಬೆಂಗಳೂರಿನ 48 ಶಾಲೆಗಳಿಗೆ ಬಾಂಬ್ ಬೆದರಿಕೆಯ ಬಗ್ಗೆ ಇಮೇಲ್ ಬಂದಿದೆ. ಬಾಂಬ್ ಬೆದರಿಕೆಯ ಬಗ್ಗೆ ಇಮೇಲ್ ಐಡಿಯಿಂದ ಸಂದೇಶವನ್ನು ಸ್ವೀಕರಿಸಲಾಗಿದೆ. ಶೋಧ ಕಾರ್ಯಾಚರಣೆ ಬಹುತೇಕ ಮುಗಿದಿದೆ ಮತ್ತು ಇಲ್ಲಿಯವರೆಗೆ, ನಮ್ಮ ತಂಡಗಳಿಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಸಂದೇಶದಂತೆ ತೋರುತ್ತಿದೆ. ನಾವು ಕೂಡ ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಮೇಲ್ ಬೆದರಿಕೆಯ ನಂತರ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಆತಂಕ ಗೊಂಡ ಪೋಷಕರು ಭಯಭೀತರಾಗಿ ತಮ್ಮ ಕಚೇರಿ ಮತ್ತು ಮನೆಗಳಿಂದ ಶಾಲೆಗಳಿಗೆ ಧಾವಿಸಿ, ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

“ಶಾಲಾ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಇಮೇಲ್ ನಲ್ಲಿ ತಿಳಿಸಲಾಗಿದೆ.. ಈ ಬಗ್ಗೆ ನಾವು ಕಮಾಂಡ್ ಸೆಂಟರ್ನಿಂದ ಕರೆ ಸ್ವೀಕರಿಸಿದ್ದೇವೆ ಮತ್ತು ತಕ್ಷಣವೇ ನಮ್ಮ ತಂಡಗಳನ್ನು ನಗರದ ವಿವಿಧ ಭಾಗಗಳಲ್ಲಿ ಇರುವ ಶಾಲೆಗಳಿಗೆ ಕಳುಹಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶಾಲೆಯ ಆವರಣದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಲಾಯಿತು,” ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

“ಈ ಹಿಂದೆಯೂ ಇದೇ ರೀತಿಯ ಬೆದರಿಕೆ ಪತ್ರಗಳು ಮತ್ತು ಇಮೇಲ್‌ಗಳು ಶಾಲೆಗಳಿಗೆ ಬಂದಿದ್ದವು. ಇದು ಕಿಡಿಗೇಡಿತನದ ಕೃತ್ಯ ಎಂದು ಕಂಡುಬಂದಿದೆ. ಪೊಲೀಸರು ಇದರ ಹಿಂದೆ ಇರುವವರನ್ನು ಗುರುತಿಸಿದ್ದಾರೆ. ಪೊಲೀಸರು ಇಂದಿನ ಮೇಲ್‌ಗಳನ್ನು ಸಹ ಪರಿಶೀಲಿಸುತ್ತಿದ್ದಾರೆ … ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಹೇಳಿದ್ದಾರೆ.

ಇವೆಲ್ಲವೂ ಹುಸಿ ಬಾಂಬ್ ಬೆದರಿಕೆ ಮೇಲ್‌ಗಳು, ಜನ ಆತಂಕಪಡುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದ್ದಾರೆ.ಕಳೆದ ವರ್ಷವೂ ಕೆಲವು ದುಷ್ಕರ್ಮಿಗಳು ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆಯ ಕುರಿತು ಇಂತಹ ಇಮೇಲ್‌ಗಳನ್ನು ಕಳುಹಿಸಿದ್ದರು, ನಂತರ ಅದು ಹುಸಿ ಸಂದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಬಾಂಬ್ ಬೆದರಿಕೆ ಇರುವ ಶಾಲೆಯೊಂದಕ್ಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿ ಕುರಿತು ಶಾಲೆ ಸಿಬ್ಬಂದಿ ಹಾಗೂ ಪೊಲೀಸರಿಂದ ಮಾಹಿತಿ ಪಡೆದರು.

“ನನಗೆ ತಿಳಿದಿರುವ ಕೆಲವು ಶಾಲೆಗಳು ಮತ್ತು ನನ್ನ ಮನೆಯ ಸಮೀಪವಿರುವ ಶಾಲೆಗಳಿಗೆ ಬಾಂಬ್ ಬೆದರಿಕೆ ಇರುವ ಸುದ್ದಿಯನ್ನು ಟಿವಿಯಲ್ಲಿ ನೋಡಿದ ನಂತರ ನಾನು ಸ್ವಲ್ಪ ಆತಂಕಗೊಂಡೆ. ಹಾಗಾಗಿ ಪರಿಶೀಲಿಸಲು ಶಾಲೆಗೆ ಹೋದೆ. ಪೊಲೀಸರು ನನಗೆ ಮೇಲ್ ತೋರಿಸಿದ್ದಾರೆ. ಮೇಲ್ನೋಟಕ್ಕೆ ಅದು ನಕಲಿ ಎಂದು ತೋರುತ್ತಿದೆ. ಆದರೆ ನಾವು ಜಾಗರೂಕರಾಗಿರ ಬೇಕು. ಪೋಷಕರು ಸ್ವಲ್ಪ ಆತಂಕಕ್ಕೊಳಗಾಗಿದ್ದಾರೆ. ಆದರೆ ಚಿಂತಿಸಬೇಕಾಗಿಲ್ಲ. ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ” ಎಂದು ಡಿಸಿಎಂ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!