ಸುಳ್ಯ: ಬಿಜೆಪಿ ಮುಖಂಡನ ಕೊಲೆ ಆರೋಪಿಯನ್ನು ಗುಂಡಿಕ್ಕಿ ಹತ್ಯೆ
ಸುಳ್ಯ: ಬಿಜೆಪಿ ಮುಖಂಡನ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊರ್ವನ ಮೇಲೆ ಗುರುವಾರ ಬೆಳ್ಳಂಬೆಳ್ಳಗ್ಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ ಶಾಂತಿನಗರ ಎಂಬಲ್ಲಿ ನಡೆದಿದೆ.
ಸುಳ್ಯ ನಗರದ ಶಾಂತಿನಗರದ ನಿವಾಸಿ ಸಂಪತ್ ತನ್ನ ಮನೆಯಿಂದ ಕಾರಿನಲ್ಲಿ ಪೇಟೆ ಕಡೆ ಮುಂಜಾನೆ 6.15 ಗಂಟೆಗೆ ತೆರಳತ್ತಿರುವಾಗ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆನ್ನಲಾಗಿದೆ.
ಸಂಪತ್ ಬಿಜೆಪಿ ಹಾಗೂ ಸಾಮಾಜಿಕ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.
ಮೊದಲು ದುಷ್ಕರ್ಮಿಗಳು ಸಂಪತ್ ಕಾರಿನ ಗ್ಲಾಸಿಗೆ ಗುಂಡು ಹಾರಿಸಿದ್ದಾರೆ. ಆ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆನ್ನಲಾಗಿದೆ. ದುಷ್ಕರ್ಮಿಗಳಿಂದ ರಕ್ಷಿಸಿಸಿಕೊಳ್ಳಲು ಸಂಪತ್ ಸಮೀಪದ ಮನೆಗೆ ಓಡಿ ಹೋಗಿದ್ದು, ಅಲ್ಲಿಗೂ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಗಾಯಾಳು ಸಂಪತ್ ನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್ ಐ ಹರೀಶ್, ಹಾಗೂ ಪೋಲೀಸರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.