ಕಾಂಗ್ರೆಸ್ ಮೈತ್ರಿ ಕೂಟದ ತುಷ್ಟೀಕರಣ ದೇಶಕ್ಕೆ ಮಾರಕ- ಶಾಸಕ ಕಾಮತ್ ಕಿಡಿ
ಮಂಗಳೂರು: ದೇಶವನ್ನು ಒಗ್ಗೂಡಿಸುವ ಕೆಲಸ ಬಿಜೆಪಿ ಮಾಡಿದರೆ, ಕಾಂಗ್ರೆಸ್ ಎಂದಿನಂತೆ ತನ್ನ ಸ್ವಾರ್ಥಕ್ಕಾಗಿ ದೇಶವನ್ನು ಛಿದ್ರಗೊಳಿಸುವ ಕೆಲಸವನ್ನು ಮುಂದುವರಿಸಿದೆ. ಬಿಹಾರ ರಾಜ್ಯದಲ್ಲಿ ಸಾರ್ವಜನಿಕ ರಜೆಗಳ ವಿಷಯದಲ್ಲಿ ಉಂಟಾಗಿರುವ ವಿವಾದವು I.N.D.I.A ಮೈತ್ರಿ ಕೂಟದ ಜಿಹಾದಿ ಮನಸ್ಥಿತಿಯನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಹಾರದ ಶಿಕ್ಷಣ ಇಲಾಖೆ ಹೊರಡಿಸಿರುವ 2024ರ ಸಾರ್ವಜನಿಕ ರಜೆಗಳ ಪಟ್ಟಿಯಲ್ಲಿ ಹಿಂದೂಗಳ ಶ್ರೀಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ರಾಮನವಮಿ, ಶಿವರಾತ್ರಿ, ವಸಂತ ಪಂಚಮಿ, ಜೀವಿತ ಪುತ್ರಿಕಾ, ಹಬ್ಬಗಳಿಗೆ ನೀಡಲಾಗುತ್ತಿದ್ದ ರಜೆಯನ್ನು ರದ್ದುಗೊಳಿಸಿ, ಇಸ್ಲಾಂ ಹಬ್ಬಗಳಿಗೆ ಹೆಚ್ಚುವರಿ ರಜೆ ಘೋಷಿಸಲಾಗಿದೆ. ಮುಂದುವರಿದು ಉರ್ದು ಶಾಲೆಗಳು ಸೇರಿದಂತೆ ಮುಸ್ಲಿಂ ಪ್ರಾಬಲ್ಯವಿರುವ ಯಾವುದೇ ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ಘೋಷಿಸಲಾಗಿದೆ. ಆ ಮೂಲಕ ಮುಸ್ಲಿಮರಿಗಾಗಿ ಸರ್ಕಾರಿ ವಾರದ ರಜೆಯನ್ನು ಬದಲಿಸಿದ ದೇಶದ ಮೊದಲ ರಾಜ್ಯ ಬಿಹಾರವಾಗಿದೆ.
ಈ ಹಿಂದೆ ಕೇವಲ ತುಷ್ಟೀಕರಣದ ರಾಜಕೀಯಕ್ಕಾಗಿ ಕಾಶ್ಮೀರಕ್ಕೆ ಆರ್ಟಿಕಲ್ 370 ಮೂಲಕ ವಿಶೇಷ ಸ್ಥಾನಮಾನ ನೀಡಿ ಪ್ರತ್ಯೇಕತಾವಾದಕ್ಕೆ, ಭಯೋತ್ಪಾದನೆಗೆ, ಅಶಾಂತಿಗೆ ಕಾಂಗ್ರೆಸ್ ಕಾರಣವಾಗಿತ್ತು. ಆ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು. ಈಗ ಬಿಹಾರದಲ್ಲಿ ತನ್ನ ಮೈತ್ರಿ ಕೂಟದ ಜೆಡಿಯು ಪಕ್ಷದ ಮೂಲಕ ಅಂತಹದೇ ಸಮಸ್ಯೆಯನ್ನು ಸೃಷ್ಟಿಸಿ ಭವಿಷ್ಯದಲ್ಲಿ ದೇಶದೊಳಗೆ ಮತ್ತೆ ಅಶಾಂತಿ, ಅಭದ್ರತೆ ಉಂಟುಮಾಡುತ್ತಿದೆ. ಆ ಮೂಲಕ ಹಂತ ಹಂತವಾಗಿ ಬಿಹಾರದ ಇಸ್ಲಾಮೀಕರಣಕ್ಕೂ ಕಾಂಗ್ರೆಸ್ ನೇತೃತ್ವದ I.N.D.I.A ಮೈತ್ರಿಕೂಟದ ಜೆಡಿಯು ತಯಾರಿನಡೆಸಿದ್ದು ಒಟ್ಟಾರೆಯಾಗಿ ಕಾಂಗ್ರೆಸ್ಸಿನ ಜಿಹಾದಿ ಮನಸ್ಥಿತಿಯನ್ನು ತೋರಿಸುತ್ತಿದೆ.
ಈಗಲೇ ಇದನ್ನು ವಿರೋಧಿಸದಿದ್ದರೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಇಂತಹದೇ ನಿಯಮಗಳನ್ನು ಜಾರಿಗೆ ತಂದರೂ ಅಚ್ಚರಿಯಿಲ್ಲ. ಇಡೀ ದೇಶದ ಯಾವ ರಾಜ್ಯದಲ್ಲಿಯೂ ಇಲ್ಲದಂತಹ ನಿರ್ಧಾರವನ್ನು ಬಿಹಾರದಲ್ಲಿ ಮಾತ್ರ ತಳೆಯಲು ಮೊಘಲ್ ಕಾಲದ ಮನಸ್ಥಿತಿಯವರಿಂದ ಮಾತ್ರ ಸಾಧ್ಯ ಎಂದು ಶಾಸಕರು ಗುಡುಗಿದರು.