ಕಾರ್ಕಳ: ಅತಿಶಯ ಶ್ರೀ ಕ್ಷೇತ್ರ ನಲ್ಲೂರು ಬಸದಿಯಲ್ಲಿ ದೀಪೋತ್ಸವ
ಕಾರ್ಕಳ: ಅತಿಶಯ ಶ್ರೀಕ್ಷೇತ್ರ ನಲ್ಲೂರು ಬಸದಿಯಲ್ಲಿ ಮಂಗಳವಾರ ಶ್ರೀ ಕೂಷ್ಮಾಂಡಿನೀ ಆರಾಧನೆ, ಉಯ್ಯಾಲೆ ಸೇವೆ ಮತ್ತು ದೀಪೋತ್ಸವ ಬಹಳ ವಿಜ್ರಂಬಣೆಯಿಂದ ನಡೆಯಿತು.
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಅತಿಶಯ ಶ್ರೀ ಕ್ಷೇತ್ರ ನಲ್ಲೂರು ಬಸದಿಗೆ ಪುರಪ್ರವೇಶ ಮಾಡಿದರು ಆ ಪ್ರಯುಕ್ತ ಪೂಜ್ಯ ಸ್ವಾಮೀಜಿಯವರಿಗೆ ಗುರುವಂದನೆ ಭಕ್ತಿಗೌರವ ಸಮರ್ಪಣಾ ಕಾರ್ಯಕ್ರಮ ನೆರವೇರಿತು.
ಜೈನ ಮಠ ಮೂಡುಬಿದಿರೆಯ ಪರಮಪೂಜ್ಯ ಭಾರತಭೂಷಣ ಜಗದ್ಗರು ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯ ಮತ್ತು ನೇತೃತ್ವ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಜೈನ ಮಠ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಜಗದ್ಗರು ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ಗುರುವಂದನೆ ಭಕ್ತಿ ಗೌರವ ಸಮರ್ಪಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಸ್ವಾಮೀಜಿಯವರು, ದೀಪ ಅನ್ನೋದು ಶಾಶ್ವತವಲ್ಲ ದೀಪದ ಎಣ್ಣೆ ಮುಗಿದ ಕೂಡಲೇ ಆರಿ ಹೋಗುತ್ತದೆ. ಶಾಶ್ವತವಾದದ್ದು ಜ್ಞಾನ ದೀಪ ಅದು ಆತ್ಮದಲ್ಲಿರುತ್ತದೆ ಅದು ಯಾವತ್ತೂ ಆರಿ ಹೋಗಲ್ಲ ಅದು ಶಾಶ್ವತವಾದ ದೀಪ. ಜ್ಞಾನದಲ್ಲಿ ಶ್ರೇಷ್ಠ ಜ್ಞಾನ ಕೇವಲ ಜ್ಞಾನ ಎಂದರು.
ದೀಪವನ್ನು ಬೆಳಗುವಾಗ ಜ್ಞಾನ ದೀಪವನ್ನು ಹ್ರದಯದಲ್ಲಿ ಬೆಳಗುತ್ತೇವೆ ಎಂಬ ಸಂಕಲ್ಪದೊಂದಿಗೆ ದೀಪ ಬೆಳಗಿಸಿ ನಿಮ್ಮ ಜೀವನ ಖಂಡಿತವಾಗಿಯೂ ಬೆಳಗುತ್ತದೆ. ದಾನದಿಂದ ದಾರಿದ್ರ್ಯ ನಾಶವಾಗುತ್ತದೆ ಅತಿ ಹೆಚ್ಚು ದಾನ ವ್ಯಕ್ತಿಯ ಶ್ರೇಷ್ಠತೆಯನ್ನು ವ್ರದ್ದಿಸುತ್ತದೆ. ಸಂಧರ್ಭದಲ್ಲಿ ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಮಾತನಾಡಿ ಶ್ರವಣಬೆಳಗೊಳ ಹಾಗೂ ಮೂಡುಬಿದಿರೆ ಜೈನ ಸಮಾಜದ ಎರಡು ಕಣ್ಣುಗಳಿದ್ದಂತೆ. ಇಂದು ಜೈನ ಸಮುದಾಯ ಎದ್ದು ನಿಂತಿದೆ. ಹಿಂದೆ ಕೆಲವೇ ಜನ ಹಿರಿಯ ಕೈಯಲ್ಲಿದ್ದ ಸಮಾಜ ಇಂದು ಸ್ವಾಭಿಮಾನದಲ್ಲಿ ಬದುಕುವ ಕಾಲಘಟ್ಟದಲ್ಲಿದೆ. ಕಳೆದ ಬಾರಿಯ ಮಹಾಮಸ್ತಕಾಭೀ ಷೇಕದ ಸಂದರ್ಭದಲ್ಲಿ ಸರಕಾರ ನೀಡಿದ ಜವಾಬ್ದಾರಿ ಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದೆ ಮುಂದೆಯೂ ಸರಕಾರದ ಸವಲತ್ತುಗಳನ್ನು ಶ್ರವಣಬೆಳಗೊಳಕ್ಕೆ ದೊರಕಿಸಿಕೊಳ್ಳುವಲ್ಲಿ ನಿಸ್ವಾರ್ಥ ಪ್ರಯತ್ನ ಮಾಡುತ್ತೇನೆ ಎಂದರು.
ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್ ಮಾತನಾಡಿ ಜೈನ ಸಮುದಾಯವು ಒಂದಾಗಬೇಕು ಎಂಬ ಧ್ಯೇಯ ವಾಕ್ಯದೊಂದಿಗೆ ನೇಮಿಸಾಗರವರ್ಣಿಯವರ ಸೇವೆ ಕಾರ್ಯ ಇಂದಿಗೂ ಅನುಸ್ಮರಣೀಯ. ಇಂದು ಬಸದಿಗಳ ಜೀರ್ಣೋದ್ಧಾರವಲ್ಲ, ನಮ್ಮ ಸಮಾಜದ ಜೀರ್ಣೋದ್ಧಾರವಾಗಬೇಕಾಗಿದೆ ಎಂದರು. ಯೋಗರಾಜ್ ಶಾಸ್ತ್ರಿ ಸ್ವಾಗತಿಸಿ, ನಲ್ಲೂರು ಬಸದಿ ಅಧ್ಯಕ್ಷರಾದ ವಜ್ರನಾಥ ಚೌಟ ಪ್ರಸ್ತಾವನೆಗೈದರು. ನಂದಕುಮಾರ್ ಶಾಸ್ತ್ರಿ ಹಾಗೂ ಪುರೋಹಿತರು ಶ್ರವಣಬೆಳಗೊಳ ಸ್ವಾಮಿಜೀಯ ಪಾದ ಪೂಜೆಗೈದರು. ಸುನೀಲ್ ಕುಮಾರ್ ಬಜಗೋಳಿಯವರು ಧನ್ಯವಾದವಿತ್ತರು.