ಉಡುಪಿ ಜಿಲ್ಲೆಯಲ್ಲಿ ಇ-ಆಫೀಸ್ ಶೇ.100ರಷ್ಟು ಅನುಷ್ಠಾನ: ಡಿಸಿ ಡಾ. ವಿದ್ಯಾಕುಮಾರಿ
ಉಡುಪಿ, ನ.29: ರಾಜ್ಯ ಸರಕಾರದ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತಿದ್ದು , ಜನರಿಗೆ ಶೀಘ್ರ ಮತ್ತು ಸರಳ ಆಡಳಿತ ನೀಡಲು ಜಿಲ್ಲೆಯಲ್ಲಿ ಇ-ಆಫೀಸ್‌ನ್ನು ಶೇ.100ರಷ್ಟು ಅನುಷ್ಠಾನಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಕಂದಾಯ ಇಲಾಖೆ ಸರಕಾರದ ಒಂದು ಪ್ರಮುಖ ಇಲಾಖೆಯಾಗಿದ್ದು, ಮಾತೃ ಇಲಾಖೆ ಎಂದು ಗುರುತಿಸಿ ಕೊಳ್ಳುತ್ತದೆ. ಸಾರ್ವಜನಿಕರು ದಿನನಿತ್ಯ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆಯಲ್ಲಿ ಅನೇಕ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ಮೂಲಕ ವಿಳಂಬ ವಾಗದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಲು ನಿಗದಿತ ಕಾಲವನ್ನು ಗೊತ್ತುಪಡಿಸಿ ಅದರಂತೆ ಶೀಘ್ರದಲ್ಲಿ ಕೆಲಸ ಮಾಡಿಕೊಡಲು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ನಿರ್ದೇಶನವನ್ನು ಪಾಲಿಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಯ ಎಲ್ಲಾ ಕಡತಗಳನ್ನು ಇ-ಆಫೀಸ್ ಮೂಲಕವೇ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲೆಯ ಕಂದಾಯ ಕಚೇರಿ ಗಳಾದ ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಅಯುಕ್ತರ ಕಚೇರಿ ಹಾಗೂ ಎಲ್ಲಾ ತಹಶೀಲ್ದಾರರುಗಳ ಕಚೇರಿಗಳಲ್ಲಿ ಶೇ.100ರಷ್ಟು ಇ-ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಇ-ಆಫೀಸ್ ತಂತ್ರಾಂಶದ ಮೂಲಕ ಜಿಲ್ಲೆಯ ಕಂದಾಯ ಕಚೇರಿಗಳಲ್ಲಿ ಒಟ್ಟು 16,165 ಕಡತಗಳನ್ನು ಸೃಷ್ಟಿಸಿದ್ದು, ಅಧೀನದ ಇತರೆ ಇಲಾಖೆಗಳ 93,687 ಕಡತಗಳು ಸ್ವೀಕೃತಿಗೊಂಡಿವೆ. ಈ ಮೂಲಕ ಇದುವರೆಗೆ ಒಟ್ಟು 1,09,271 ಕಡತಗಳು ಈ ತಂತ್ರಾಂಶದಲ್ಲಿ ವಿಲೇವಾರಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಭೂಮಿ ತಂತ್ರಾಂಶ: ಭೂಮಿ ತಂತ್ರಾಂಶದಡಿ ಮ್ಯುಟೇಶನ್ ವಿಥ್‌ಔಟ್ ನೋಟೀಸ್ ಒನ್ ಡೇ ಅಡಿಯಲ್ಲಿ 42,234 ಪ್ರಕರಣಗಳನ್ನು ವಿಲೇವಾರಿ ಮಾಡಿ ಶೇ.99.64ರಷ್ಟು ಸಾಧನೆ ಮಾಡಲಾಗಿದೆ. ಅದೇ ರೀತಿ ಮ್ಯುಟೇಶನ್ ವಿಥ್ ನೋಟೀಸ್ ಸೆವೆನ್ ಡೇಸ್ ಅಡಿ 8675 ಪ್ರಕರಣಗಳನ್ನು ವಿಲೇವಾರಿ ಮಾಡಿ ಶೇ. 96.26ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ಮ್ಯುಟೇಶನ್ ವಿಥ್ ನೋಟೀಸ್ 15 ಡೇಸ್ ಅಡಿ ಒಟ್ಟು 5141 ಪ್ರಕರಣಗಳನ್ನು ವಿಲೇವಾರಿ ಮಾಡಿ ಶೇ. 91.16 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಟಲ್ ಜನಸ್ನೇಹಿ ಕೇಂದ್ರ: ಜಿಲ್ಲೆಯಾದ್ಯಂತ ಒಟ್ಟು 10 ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಎ.ಜೆ.ಎಸ್.ಕೆ ಅಡಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ್ತವ್ಯ ದೃಢಪತ್ರ, ವಂಶವೃಕ್ಷ, ಪಿಂಚಣಿ, ಸಂಧ್ಯಾ ಸುರಕ್ಷ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಪಿಹೆಚ್‌ಪಿ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ಯೋಜನೆ, ಮೈತ್ರಿ, ಮನಸ್ವಿನಿ ಹಾಗೂ ಇತರೆ ಸೇವೆಗಳ ಪ್ರಯೋಜನವನ್ನು ಜನಸಾಮಾನ್ಯರು ಪಡೆದುಕೊಳ್ಳು ತ್ತಿದ್ದಾರೆ. ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಒಟ್ಟು 76,870 ಅರ್ಜಿಗಳು ಸ್ವೀಕೃತವಾಗಿದ್ದು, 73,204 ಅರ್ಜಿಗಳನ್ನು ವಿಲೇವಾರಿ ಮಾಡಿ, ಶೇ. 95.23 ಸಾಧನೆ ಮಾಡಲಾಗಿದೆ.
ಕಂದಾಯ ನ್ಯಾಯಾಲಯದ ಕಡತ ವಿಲೇವಾರಿ: ಕರ್ನಾಟಕ ಭೂಕಂದಾಯ ಕಾಯ್ದೆ ಅಡಿಯಲ್ಲಿ ಸಾರ್ವಜನಿಕರು ಹಾಗೂ ರೈತರಿಗೆ ಮೇಲ್ಮನವಿ ಅಥವಾ ಪುನರ್ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟು 154 ಪ್ರಕರಣಗಳು ಮತ್ತು ಕುಂದಾಪುರ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಒಟ್ಟು 765 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಆರ್‌ಟಿಸಿ ವಿಲೇವಾರಿ: ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಒಟ್ಟು 11,074 ಆರ್‌ಟಿಸಿ ಪ್ರಕರಣಗಳನ್ನು ಹಾಗೂ ಭೂಮಿ ತಂತ್ರಾಂಶದ ಮೂಲಕ ಒಟ್ಟು 84,407 ಪ್ಲಾಟ್‌ಗಳನ್ನು ಪ್ಲ್ಯಾಗ್ ಮಾಡಿರುವುದಾಗಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.