ಪಡುಬಿದ್ರಿ: ರಸ್ತೆ ಕಾಮಗಾರಿ ಅಪೂರ್ಣ – ಹೆದ್ದಾರಿ ತಡೆದು ಆಕ್ರೋಶ
ಪಡುಬಿದ್ರಿ : ಇಲ್ಲಿನ ಎರ್ಮಾಳ್ ಕಲ್ಸಂಕ ಬಳಿ ಕಾಮಿನಿ ಹೊಳೆ ತೋಡಿಗೆ ಅಡ್ಡಲಾಗಿ ನಿರ್ಮಿಸಬೇಕಿದ್ದ ಕಿರು ಸೇತುವೆ ಕಾಮಗಾರಿಯು 2018ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಇಂದಿಗೂ ಕಾಮಗಾರಿ ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದು, ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ಇದರಿಂದ ಆಕ್ರೋಶಿತರಾದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಸಂಸದೆ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕ ಲಾಲಾಜಿ ಆರ್. ಮೆಂಡನ್, ಹೆದ್ದಾರಿ ಇಲಾಖೆ, ನವಯುಗ ಗುತ್ತಿಗೆ ಕಂಪನಿಯ ವಿರುದ್ಧ ಧಿಕ್ಕಾರ ಕೂಗಿದರು. ರಸ್ತೆ ತಡೆಯಿಂದಾಗಿ ಸಾಲುಗಟ್ಟಿ ವಾಹನಗಳು ಹೆದ್ದಾರಿಯಲ್ಲಿ ನಿಂತಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿನಯಕುಮಾರ್ ಸೊರಕೆ, ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರು ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಆಡಳಿತ ವ್ಯವಸ್ಥೆ ಟೀಕಿಸುತ್ತಾರೆ. ಜನನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ಸಂಸದರು, ಶಾಸಕರು ಮೌನವಾಗಿದ್ದಾರೆ ಎಂದು ದೂರಿದರು. ಕಾಮಗಾರಿ ಪೂರ್ತಿಗೊಳಿಸಲು 15 ದಿನಗಳ ಗಡುವು ನೀಡಿದ ಸೊರಕೆ, ಇನ್ನು ಕಾಮಗಾರಿ ವಿಳಂಬವಾದಲ್ಲಿ, ಸಾವಿರಾರು ಜನ ಸೇರಿಸಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. |